×
Ad

ಝಾಫರ್ ಹುಸೈನ್‌ರನ್ನು ಕೊಂದು ಹಾಕಿ ಎಂದಿದ್ದ ಸರಕಾರಿ ಅಧಿಕಾರಿಗಳು: ಪ್ರತ್ಯಕ್ಷದರ್ಶಿ ಹೇಳಿಕೆ

Update: 2017-06-17 19:51 IST

ಪ್ರತಾಪ್‌ಗಢ್, ಜೂ. 17: ರಾಜಸ್ಥಾನದ ಆಯುಕ್ತ ಸೇರಿದಂತೆ ಸರಕಾರಿ ಅಧಿಕಾರಿಗಳಿಂದ ಶುಕ್ರವಾರ ಥಳಿತಕ್ಕೊಳಗಾಗಿ ಮೃತಪಟ್ಟ ಝಾಫರ್ ಹುಸೈನ್‌ರ ಪ್ರತಾಪ್‌ಗಢ್‌ನಲ್ಲಿರುವ ನಿವಾಸದಲ್ಲಿ ಗಾಢ ವೌನ ಆವರಿಸಿದೆ.

ಝಾಫರ್ ಹುಸೈನ್ ಅವರ ಪತ್ನಿ ರಶೀದಾ ಬಿ ದಿಗ್ಭ್ರಮೆಗೊಳಗಾಗಿದ್ದಾರೆ. ಬಿಳಿಯ ದುಪ್ಪಟದಿಂದ ತನ್ನ ಮುಖ ಮುಚ್ಚಿಕೊಂಡಿರುವ ಅವರು ಖಾಲಿ ಗೋಡೆಯನ್ನು ತದೇಕ ದೃಷ್ಟಿಯಿಂದ ನೋಡುತ್ತಿದ್ದಾರೆ. ಅವರ ಪುತ್ರಿ 14 ವರ್ಷದ ಸಾಬ್ರಾ ತಂದೆಯ ಸಾವಿನ ನೋವು ಮರೆಯಲು ಖುರಾನ್ ಪಠಿಸುತ್ತಿದ್ದಾಳೆ.

   ಪತ್ನಿ ಹಾಗೂ ಪುತ್ರಿ ಶೌಚ ಕಾರ್ಯ ಪೂರೈಸುತ್ತಿದ್ದ ಸಂದರ್ಭ ಆಯುಕ್ತ ಸೇರಿದಂತೆ ಸರಕಾರಿ ಅಧಿಕಾರಿಗಳು ಫೋಟೋ ತೆಗೆಯುತ್ತಿರುವುದನ್ನು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಸಾಬ್ರಾಳ ತಂದೆ ಸಿಪಿಐ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಝಾಫರ್ ಹುಸೈನ್ ಥಳಿತಕ್ಕೊಳಗಾಗಿದ್ದರು.

ಅವರು ನನ್ನ ಮಗಳಿಗೆ ಬೆದರಿಕೆ ಒಡ್ಡಿದರು. ಅವಳ ತಂದೆಯನ್ನು ದಹಿಸುವುದಾಗಿ, ನನ್ನ ಮುಖವನ್ನು ವಿರೂಪಗೊಳಿಸುವುದಾಗಿ ಹೇಳಿದರು ಎಂದು ರಶೀದಾ ಬಿ ರೋದಿಸುತ್ತಾ ತಿಳಿಸಿದ್ದಾರೆ.

 ಅದು ಸುಮಾರು 6.30ರ ಸಮಯ. ನಾವು ಶೌಚಕ್ಕಾಗಿ ಬಯಲು ಪ್ರದೇಶಕ್ಕೆ ತೆರಳಿದ್ದೆವು. ಈ ಸಂದರ್ಭ ನಗರಸಭೆಯ ಅಧಿಕಾರಿಗಳ ಕಾರೊಂದು ಬಂತು. ಅವರು ನಮ್ಮ ಫೋಟೋ ತೆಗೆಯಲು ಆರಂಭಿಸಿದರು. ನಮಗೆ ಅವಾಚ್ಯ ಶಬ್ದದಿಂದ ಬೈಯಲು ಆರಂಭಿಸಿದರು. ನಮ್ಮ ನೀರಿನ ಮಗ್‌ಗಳನ್ನು ಕಾಲಿನಿಂದ ತುಳಿದರು. ಅವರು ನಮಗೆ ಥಳಿಸಲು ಆರಂಭಿಸಿದಾಗ ಅಪ್ಪ ಬಂದು ತಡೆಯಲು ಪ್ರಯತ್ನಿಸಿದರು. ನಗರಸಭೆಯ ನೌಕರ ಕಮಲ್ ನನ್ನ ಅಪ್ಪನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿದ. ಹಲ್ಲೆ ನಡೆಯುವ ಸಂದರ್ಭ ಕಾರಿನಲ್ಲಿ ಕುಳಿತಿದ್ದ ಆಯುಕ್ತರು ಉತ್ತೇಜನ ನೀಡುತ್ತಿದ್ದರು ಎಂದು ಸಾಬ್ರಾ ತಿಳಿಸಿದ್ದಾಳೆ.

ಹತ್ಯೆ ವಿರೋಧಿಸಿ ಪ್ರತಿಭಟನೆ

48ರ ಹರೆಯದ ಝಾಫರ್ ಹುಸೈನ್ ಮೇಲೆ ಅಧಿಕಾರಿಗಳು ನಡೆಸಿದ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿರುವುದನ್ನು ಖಂಡಿಸಿ ಪ್ರತಾಪ್‌ಗಢದಲ್ಲಿರುವ ಝಾಫರ್ ಹುಸೈನ್‌ನ ನಿವಾಸದ ಹೊರಭಾಗದಲ್ಲಿ ಗ್ರಾಮಸ್ಥರು ಸಂಘಟಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಶಾಹಿದಾ, ಹಲ್ಲೆಯಿಂದಾಗಿ ಕಮಲ್‌ನ ಕೈ ಹಾಗೂ ಅಂಗಿಯಲ್ಲಿ ಝಾಫರ್‌ನ ರಕ್ತದ ಕಲೆಗಳಾಗಿವೆ ಎಂದು ಹೇಳಿದ್ದಾರೆ.

ಪೊಲೀಸರು ಪ್ರಥಮ ಮಾಹಿತಿ ವರದಿಯಲ್ಲಿ ಆಯುಕ್ತ ಅಶೋಕ್ ಜೈನ್ ಸೇರಿದಂತೆ 5 ಮಂದಿ ಸರಕಾರಿ ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News