ಮಾರುತಿ ಓಮ್ನಿ ಆ್ಯಂಬುಲೆನ್ಸ್‌ಗೆ ಮತ್ತೆ ಅವಕಾಶ ಸಿಕ್ಕಿದೆ; ದಯಾನಂದ್

Update: 2017-06-17 14:30 GMT

ಪುತ್ತೂರು,ಜೂ.17: ಮಾರುತಿ ಓಮ್ನಿ ವಾಹನವನ್ನು ಆ್ಯಂಬುಲೆನ್ಸ್ ತುರ್ತು ಚಿಕಿತ್ಸೆಯ ಸೇವೆಗೆ ಬಳಸದಂತೆ ರಾಜ್ಯ ಸರಕಾರದ ಪರವಾಗಿ ಸಾರಿಗೆ ಇಲಾಖೆಯ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ತೀವ್ರ ಆಕ್ಷೇಪ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆದೇಶವನ್ನು ಪರಿಷ್ಕರಿಸಲಾಗಿದ್ದು, ಪ್ರಸ್ತುತ ನೋಂದಣಿಯಾಗಿರುವ ಮಾರುತಿ ಓಮ್ನಿ ವಾಹನಗಳನ್ನು ಆ್ಯಂಬುಲೆನ್ಸ್ ಸೇವೆಗೆ ಬಳಸಲು ಮತ್ತೆ ಅವಕಾಶ ನೀಡಲಾಗಿದೆ ಎಂದು ಪುತ್ತೂರು ಆ್ಯಂಬುಲೆನ್ಸ್ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಆದರ್ಶ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ದಯಾನಂದ್ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದ ಹಳ್ಳಿ ಪ್ರದೇಶಗಳಲ್ಲಿನ ಒಳ ರಸ್ತೆಗಳಲ್ಲಿ ರೋಗಿಯನ್ನು ಕರೆದೊಯ್ಯುಲು ಮಾರುತಿ ಓಮ್ನಿ ಆ್ಯಂಬುಲೆನ್ಸ್‌ಗೆ ಮಾತ್ರ ಸಾಧ್ಯವಿದ್ದು, ರೋಗಿಗಳಿಗೆ ಕನಿಷ್ಠ ದರದ ಸೇವೆ ನೀಡುವ ಸಲುವಾಗಿ ಮತ್ತೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಆ್ಯಂಬುಲೆನ್ಸ್ ಚಾಲಕ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ, ಉಪವಿಭಾಗಾಧಿಕಾರಿಗೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸ್ಪಂದಿಸಿರುವ ಸಾರಿಗೆ ಇಲಾಖೆಯ ಆಯುಕ್ತರು ಆಯುಕ್ತರು ಆದೇಶವನ್ನು ಪರಿಷ್ಕರಿಸಿ ಪ್ರಸ್ತುತ ಇರುವ ಓಮ್ನಿ ಆ್ಯಂಬುಲೆನ್ಸ್‌ಗಳಿಗೆ ಮತ್ತೆ ಸೇವೆಗೆ ಅವಕಾಶ ನೀಡಿದ್ದಾರೆ .ಇದನ್ನು ಸಂಘ ಸ್ವಾಗತಿಸುತ್ತದೆ ಎಂದರು.  ಹಳೆಯ ಓಮ್ನಿ ಅಂಬ್ಯುಲೆನ್ಸ್‌ಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಈಗಾಗಲೇ ನೊಂದಣಿಯಾಗಿರುವ ಓಮ್ನಿ ಆಂಬುಲೆನ್ಸ್ ಗಳ ಅರ್ಹತಾ ಪತ್ರವನ್ನು ನವೀಕರಣಕ್ಕೂ ಯಾವುದೇ ಅಡ್ಡಿಯಿಲ್ಲ. ಈಗ ಜಾರಿಗೊಂಡಿರುವ ಆದೇಶದ ಪ್ರಕಾರ ಹೊಸ ಓಮ್ನಿ ಆ್ಯಂಬುಲೆನ್ಸ್‌ಗಳ ನೊಂದಣಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಆ್ಯಂಬುಲೆನ್ಸ್ ಚಾಲಕ ಮಾಲಕರ ಸಂಘದ ಉಪಾಧ್ಯಕ್ಷ ದಿವಾಕರ್, ಕಾರ್ಯದರ್ಶಿ ಧನಂಜಯ ಬನ್ನೂರು, ಸದಸ್ಯರಾದ ಉಪ್ಪಿನಂಗಡಿಯ ಕೆ.ಪಿ. ಮೊಹಮ್ಮದ್, ತಾರಾನಾಥ್ ಬನ್ನೂರು, ಹಮೀದ್ ಬನ್ನೂರು,ನಾಗೇಶ್ ಬನ್ನೂರು, ರಂಜಿತ್ ಕಡಬ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News