ಆಳ್ವಾಸ್‌ನಲ್ಲಿ ಇಫ್ತಾರ್ ಕೂಟ

Update: 2017-06-17 14:40 GMT

ಮೂಡುಬಿದಿರೆ,ಜೂ.18: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಶನಿವಾರ ಸಂಜೆ  ಇಫ್ತಾರ್ ಕೂಟ ನಡೆಯಿತು. ಬಂಟ್ವಾಳ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ರಂಝಾನ್ ಸಂದೇಶ ನೀಡಿ, ಅಂಗಾಗಗಳ ಉಪವಾಸ, ರಂಝಾನ್ ಮಾನವನನ್ನು ಮಾನಸಿಕ, ದೈಹಿಕ ಸಹಿತ ಸರ್ವತೋಮುಖವಾಗಿ ಪರಿಪೂರ್ಣಗೊಳಿಸುವ ತಿಂಗಳು. ಅದು ಕೇವಲ ಜಠರದ ಉಪವಾಸವಾಗದೆ ನಮ್ಮ ಎಲ್ಲ ಅಂಗಾಗಗಳ ಉಪವಾಸವಾಗಿ ಮಾಡುವ ಜರೂರತ್ ಇದೆ. ಅಲ್ಲಾಹುನ ವಿಶ್ವಾಸ, ದಿನದ ಐದು ಬಾರಿ ನಮಾಜ್, ರಂಜಾನ್,ಜಕಾತ್, ಹಜ್‌ನ ಅಡಿಪಾಯದೊಂದಿಗೆ ರಂಝಾನ್ ಇಡೀ ವಿಶ್ವದಾದ್ಯಂತ ಏಕಕಾಲದಲ್ಲಿ ಏಕ ರೀತಿಯಲ್ಲಿ ಆಚರಿಸಲ್ಪಡುತ್ತದೆ ಎಂದರು.

ದೈಹಿಕವಾಗಿ ಆಹಾರವನ್ನು ತ್ಯಜಿಸುವುದು, ಆದ್ಮಾತ್ಮಿಕವಾಗಿ ದೇವರಿಗೆ ಪ್ರಿಯವಾಗುವುದು, ಸಾಮಾಜಿಕ ದಾನದ ಮೂಲಕ ಒಳ್ಳೆಯದನ್ನು ಮಾಡುವುದು. ಮಾನಸಿಕವಾಗಿ ಕಾಮ, ಕ್ರೋದ, ಮದ, ಮತ್ಸರ, ಲೋಭವನ್ನು ನಿಯಂತ್ರಿಸುವುದು ರಂಜಾನ್‌ನ ಪ್ರಮುಖ ಉದ್ದೇಶವಾಗಿದೆ. ರಂಝಾನ್ ಮಾನಸಿಕವಾಗಿ, ದೈಹಿಕವಾಗಿ,ಆದ್ಮಾತ್ಮಿಕವಾಗಿ ನಮ್ಮನ್ನು ಪರಿಪೂರ್ಣಗೊಳಿಸಲು ಇರುವ ತರಬೇತಿಯ ತಿಂಗಳು. ರಂಝಾನ್ ಸಂದರ್ಭ ಪರಿಶುದ್ಧತೆಯಿಂದ ಪರಿಪೂರ್ಣರಾಗಬೇಕೆ ವಿನಃ ಯಾವುದೇ ರೀತಿಯ ಕಳಂಕದಲ್ಲಿ ತೊಡಗಬಾರದು. ಎಲ್ಲ ಧರ್ಮಗಳಲ್ಲಿಯೂ ಉಪವಾಸ ಮಹತ್ವವನ್ನು ಪಡೆದಿದೆ. ಜೈನರಲ್ಲಿ ಸಲ್ಲೇಖ ವೃತ, ಕ್ರೈಸ್ತರು ಪವಿತ್ರ ತಿಂಗಳಲ್ಲಿನ ಉಪವಾಸ, ಹಿಂದೂ ಧರ್ಮದವರು ಏಕಾದಶಿ, ಸಂಕಷ್ಟಿ ಸಹಿತ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಉಪವಾಸ ಆಚರಿಸುತ್ತಿದ್ದಾರೆ ಎಂದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮೂಲ್ಕಿ ಧರ್ಮಗುರು ರೆ.ಎಫ್ .ಎಕ್ಸ್ ಗೋಮ್ಸ್, ಚೌಟರ ಅರಮನೆಯ ಕುಲದೀಪ್ ಎಂ., ಉದ್ಯಮಿ ಕೆ.ಶ್ರೀಪತಿ ಭಟ್, ಅಬ್ದುಲ್ ರವೂಫ್ ಪುತ್ತಿಗೆ, ರಾಮಚಂ್ರ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಉಪಸ್ಥಿತರಿದ್ದರು. ಯಹ್ಯಾ ಪುತ್ತಿಗೆ ಕುರಾನ್ ಪಠಿಸಿದರು. ಮುಹಮ್ಮದ್ ಶರೀಫ್ ಅವರು ಅಬ್ದುಲ್ ರಝಾಕ್ ಅನಂತಾಡಿ ಅವರನ್ನು ಪರಿಚಯಿಸಿದರು. ಅಬು ಅಲಾ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News