ಜಾನುವಾರು ಮಾರಾಟ, ಹತ್ಯೆ ನಿಷೇಧ ಅಧಿಸೂಚನೆಗೆ ಗೋವಾ ಸರಕಾರದ ಆಕ್ಷೇಪ

Update: 2017-06-17 15:00 GMT

ಪಣಜಿ, ಜೂ.17: ಜಾನುವಾರು ಹತ್ಯೆ ಮತ್ತು ಮಾರಾಟ ನಿಷೇಧಿಸಿ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ಅಧಿಸೂಚನೆ ರಾಜ್ಯದ ಜನರಲ್ಲಿ ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಿ ಕೆಲವು ತಿದ್ದುಪಡಿಗಳನ್ನು ಸೂಚಿಸಲಿದೆ ಎಂದು ಗೋವಾದ ಕೃಷಿ ಸಚಿವ ವಿಜಯ್ ಸರ್ದೇಸಾಯ್ ತಿಳಿಸಿದ್ದಾರೆ.

 ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಜೊತೆ ತಾನು ಮಾತನಾಡಿದ್ದು , ಪ್ರಧಾನಿಗೆ ಶೀಘ್ರ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಸರ್ದೇಸಾಯ್ ಹೇಳಿದ್ದಾರೆ.

 ಅಲ್ಲದೆ ಸಂಬಂಧಿತ ಕೇಂದ್ರ ಸಚಿವರು ಪಾರಿಕ್ಕರ್ ಜೊತೆ ಮಾತನಾಡಿದ್ದು ಅಧಿಸೂಚನೆ ಕುರಿತು ಇರುವ ಆಕ್ಷೇಪಗಳನ್ನು ಲಿಖಿತವಾಗಿ ಸಲ್ಲಿಸುವಂತೆ ತಿಳಿಸಿರುವುದಾಗಿ ಸರ್ದೇಸಾಯ್ ಹೇಳಿದ್ದಾರೆ.

 ದೇಶದ ಪ್ರಜೆಗಳೆಲ್ಲರನ್ನೂ ಸಸ್ಯಾಹಾರಿಗಳನ್ನಾಗಿಸಲು ಕೇಂದ್ರ ಸರಕಾರ ಉದ್ದೇಶಿಸಿದೆಯೇ ಎಂಬ ಭೀತಿ ಜನರಲ್ಲಿದೆ. ಗೋವಾ ರಾಜ್ಯದಲ್ಲಿ ಗೋಮಾಂಸ ತಿನ್ನುವವರ ಸಂಖ್ಯೆ ಗಮನಾರ್ಹವಾಗಿದೆ. ಆದ್ದರಿಂದ ಗೋವಾದ ಜನರ ಮನಸ್ಸಿನಲ್ಲಿರುವ ಸಂದೇಹ ನಿವಾರಣೆಯಾಗಬೇಕಿದೆ ಎಂದವರು ಹೇಳಿದರು.

ಜನರ ಮನದಲ್ಲಿರುವ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಅಧಿಸೂಚನೆಯಲ್ಲಿ ಮಾರ್ಪಾಡಿಗೆ ಕೇಂದ್ರ ಸಿದ್ಧ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಗೋವಾ ಫಾರ್ವರ್ಡ್ ಪಕ್ಷದ ಸದಸ್ಯರಾದ ನಾವು ಮುಖ್ಯಮಂತ್ರಿಗೆ ಮನವಿ ನೀಡಿದ್ದೇವೆ ಎಂದ ಸರ್ದೇಸಾಯ್, ಗೋವಾ ರಾಜ್ಯ ಈ ಅಧಿಸೂಚನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಪಾದಿಸಿದರು.

 ಯಾವ ವಿಷಯದಲ್ಲಿ ತಿದ್ದುಪಡಿ ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ದೇಸಾಯ್, ಹಾಲು ಕೊಡುವ ಮತ್ತು ಭಾರ ಎಳೆಯುವ ಪ್ರಾಣಿಗಳ ಬಗ್ಗೆ ಅಧಿಸೂಚನೆ ಯಲ್ಲಿ ವಿವರಿಸಲಾಗಿದೆ. ಈ ಪ್ರಾಣಿಗಳು ಮುದಿಯಾದಾಗ ಅವನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಕೋಳಿ, ಆಡು.. ಹೀಗೆ ಎಲ್ಲಾ ಪ್ರಾಣಿಗಳ ಹತ್ಯೆಯನ್ನೂ ನಿಷೇಧಿಸಲಾಗಿದೆ. ಎಲ್ಲರೂ ಸಸ್ಯಾಹಾರಿಗಳಾಗಬೇಕೆಂದು ಅವರು ಬಯಸುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ . ಇಲ್ಲಿ ತಿದ್ದುಪಡಿಯ ಅಗತ್ಯವಿದೆ ಎಂದು ಸರ್ದೇಸಾಯ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News