×
Ad

ಪನಾಮಗೇಟ್ ಹಗರಣ: ಜಂಟಿ ತನಿಖಾ ತಂಡದಿಂದ ನವಾಝ್ ಶರೀಫ್ ಸೋದರನ ವಿಚಾರಣೆ

Update: 2017-06-17 20:50 IST

ಇಸ್ಲಾಮಾಬಾದ್,ಜೂ.17: ಭಾರೀ ವಿವಾದವನ್ನು ಸೃಷ್ಟಿಸಿರುವ ಪನಾಮ ಗೇಟ್ ಲಂಚ ಹಗರಣಕ್ಕೆ ಸಂಬಂಧಿಸಿ ಜಂಟಿ ತನಿಖಾ ತಂಡವು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರ ಕಿರಿಯ ಸಹೋದರ ಹಾಗೂ ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಶೆಹಬಾಝ್ ಶರೀಫ್ ಅವರನ್ನು ಶನಿವಾರ ಪ್ರಶ್ನಿಸಿತು.

  ಶೆಹಬಾಝ್ ಶರೀಫ್ ಅವರು ಈ ಹಗರಣಕ್ಕೆ ಸಂಬಂಧಿಸಿ ಜಂಟಿ ತನಿಖಾ ತಂಡದ ಮುಂದೆ ಹಾಜರಾದ ಶರೀಫ್ ಕುಟುಂಬದ ನಾಲ್ಕನೆ ಸದಸ್ಯರಾಗಿದ್ದಾರೆ. ಜಂಟಿ ತನಿಖಾ ತಂಡದ ಕಾರ್ಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಪುತ್ರ ಹಂಝಾ ಶೆಹಬಾಝ್, ಪಂಜಾಬ್ ಗೃಹ ಸಚಿವ ಚೌಧರಿ ನಿಸಾರ್ ಹಾಗೂ ವಿತ್ತ ಸಚಿವ ಇಶ್ಕ್ ದಾರ್ ಅವರ ಜೊತೆಗಿದ್ದರು.

  ಪನಾಮಾ ಹಗರಣಕ್ಕೆ ಸಂಬಂಧಿಸಿ ಈ ವಾರದ ಆರಂಭದಲ್ಲಿ ಪ್ರಧಾನಿ ನವಾಝ್ ಶರೀಫ್ ಅವರನ್ನೂ ಜಂಟಿ ತನಿಖಾ ತಂಡ ವಿಚಾರಣೆಗೊಳಪಡಿಸಿತ್ತು. ಲಂಡನ್‌ನಲ್ಲಿ ಶರೀಫ್ ಕುಟುಂಬ ಹೊಂದಿದೆಯೆನ್ನಲಾದ ಅಸ್ತಿಗಳ ಬಗ್ಗೆ ತನಿಖೆಯನ್ನು ನಡೆಸಲು ಕಳೆದ ತಿಂಗಳು ಪಾಕ್ ಸುಪ್ರೀಂಕೋರ್ಟ್ ಜಂಟಿ ತನಿಖಾ ಸಮಿತಿಯನ್ನು ನೇಮಿಸಿತ್ತು.

ಶರೀಫ್ ಅವರ ಹಿರಿಯ ಪುತ್ರ ಹುಸೈನ್ ಅವರನ್ನು ಐದು ಸಲ ಪ್ರಶ್ನಿಸಲಾಗಿದ್ದರೆ, ಅವರ ಕಿರಿಯ ಪುತ್ರನನ್ನು ಜಂಟಿ ತನಿಖಾ ಸಮಿತಿಯು ಐದು ಬಾರಿ ವಿಚಾರಣೆಗಾಗಿ ಕರೆಯಿಸಿಕೊಂಡಿತ್ತು.

  1990ರಲ್ಲಿ ನವಾಝ್ ಶರೀಫ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ವಿರುದ್ಧ ಹೊರಿಸಲಾಗಿದ್ದ ಕಪ್ಪು ಹಣ ಬಿಳುಪು ಆರೋಪಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಪಾಕ್ ಸುಪ್ರೀಂಕೋರ್ಟ್ ಕಳೆದ ವರ್ಷ ಕೈಗೆತ್ತಿಕೊಂಡಿತ್ತು. ನ್ಯಾಯಾಲಯದ ಆದೇಶದಂತೆ ಜಂಟಿ ತನಿಖಾ ಸಮಿತಿಯು 60 ದಿನಗಳೊಳಗೆ ಪ್ರಕರಣದ ವಿಚಾರಣೆಯನ್ನು ಪೂರ್ತಿಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News