ರಾತ್ರಿ ವೇಳೆ ಮನೆಗಳಿಗೆ ದಾಳಿ: ಒಕ್ಕೂಟದಿಂದ ಪೊಲೀಸ್ ಅಧಿಕಾರಿಗಳ ಭೇಟಿ
ಮಂಗಳೂರು, ಜೂ. 17: ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನಿಯೋಗವು ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದ ಕಲ್ಲಡ್ಕ ಮುಸ್ಲಿಂ ಮಹಿಳಾ ಸಂತ್ರಸ್ತರನ್ನು ಭೇಟಿ ಮಾಡಿ ಪೊಲೀಸರು ರಾತ್ರಿ ವೇಳೆಯಲ್ಲಿ ಮನೆಗಳಿಗೆ ದಾಳಿ ನಡೆಸಿದ ಬಗ್ಗೆ ವಿವರಣೆ ಪಡೆಯಿತು.
ಬಳಿಕ ನಿಯೋಗವು ಬಂಟ್ವಾಳ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರಲ್ಲಿ ಕಲ್ಲಡ್ಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು.
ರಾತ್ರಿ ದಾಳಿಯ ಸಂದರ್ಭದಲ್ಲಿ ಪೊಲೀಸರು ಅಕ್ರಮವಾಗಿ ರೇಷನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ದಾಖಲೆಗಳನ್ನು ಪಡೆದ ಬಗ್ಗೆ ಹಾಗೂ ಶಾಂತಿ ಸಭೆ ಕರೆಸುವಂತೆ ಒತ್ತಾಯಿಸಲಾಯಿತು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ ಪೊಲೀಸರು ರಾತ್ರಿ ವೇಳೆಯಲ್ಲಿ ಮನೆಗಳಿಗೆ ನುಗ್ಗಿ ದೌರ್ಜನ್ಯ ಎಸಗಿರುವುದನ್ನು ಒಕ್ಕೂಟವು ತೀವ್ರವಾಗಿ ಖಂಡಿಸಿದೆಯಲ್ಲದೆ, ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದೆ.
ನಿಯೋಗದಲ್ಲಿ ಅಧ್ಯಕ್ಷ ಕೆ.ಅಶ್ರಫ್, ಸುಹೇಲ್ ಕಂದಕ್, ಅಶ್ರಫ್ ಕಿನಾರ, ಸಿ.ಎಂ.ಮುಸ್ತಫಾ, ಅಝೀಝ್ ಕುದ್ರೋಳಿ, ಮುಹಮ್ಮದ್ ಹನೀಫ್ ಯು., ಹಮೀದ್ ಕುದ್ರೋಳಿ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಶರೀಫ್ ಜೋಕಟ್ಟೆ, ಶರೀಫ್ ಯೂತ್, ಮುಹಿಯುದ್ದೀನ್ ಮೋನು ಮೊದಲಾದವರು ಉಪಸ್ಥಿತರಿದ್ದರು.