×
Ad

ಅಂಬ್ಯುಲೆನ್ಸ್ ಸಿಗದೆ ಪೊಲೀಸ್ ಬಸ್ಸಿನಲ್ಲಿ ಸಿಬ್ಬಂದಿಯ ಮೃತದೇಹ ಸಾಗಾಟ

Update: 2017-06-17 21:57 IST

ಉಡುಪಿ, ಜೂ.17: ಆಂಬ್ಯುಲೆನ್ಸ್ ಇಲ್ಲದೆ ಪೊಲೀಸ್ ತರಬೇತಿ ಕೇಂದ್ರದ ಸಿಬ್ಬಂದಿಯೊಬ್ಬರ ಮೃತದೇಹವನ್ನು ಪೊಲೀಸ್ ಬಸ್ಸಿನಲ್ಲಿ ಬಾಗಲಕೋಟೆಗೆ ಸಾಗಿಸಿದ ಘಟನೆ ಇಂದು ಬೆಳಗ್ಗೆ ಮಣಿಪಾಲದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದ ಸಿಬ್ಬಂದಿ, ಬಾಗಲಕೋಟೆಯ ನಿವಾಸಿ ಮಹಾಂತ ಬಸಪ್ಪ(37) ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಮೃತಪಟ್ಟಿದ್ದರು.ಅವರ ಮೃತದೇಹವನ್ನು ರಾತ್ರಿ ಬಾಗಲಕೋಟೆಗೆ ಕೊಂಡೊಯ್ಯಲು ಆಂಬುಲೆನ್ಸ್ ಸಿಗದ ಕಾರಣ ಮಣಿಪಾಲದ ಶವಾಗಾರದಲ್ಲಿ ಇರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಕೂಡ ಆಂಬುಲೆನ್ಸ್ ವ್ಯವಸ್ಥೆ ಆಗದ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್‌ಆರ್‌ಪಿ ಬಸ್ಸಿನಲ್ಲಿ ಹಾಕಿ ಬಾಗಲಕೋಟೆಗೆ ಸಾಗಿಸಿರುವ ಬಗ್ಗೆ ತಿಳಿದು ಬಂದಿದೆ. ಆ್ಯಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ಅಲ್ಲಿಯವರ ಮನವಿ ಮೇರೆಗೆ ಮಾನವೀಯ ದೃಷ್ಟಿಯಿಂದ ಮೃತದೇಹ ಸಾಗಿಸಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News