×
Ad

ಕಲ್ಲಡ್ಕ ಗಲಭೆ: ಪೊಲೀಸ್ ರ ಏಕಪಕ್ಷೀಯ ವರ್ತನೆ; ಶೋಭಾ ಕರಂದ್ಲಾಜೆ

Update: 2017-06-17 22:33 IST

ಬಂಟ್ವಾಳ, ಜೂ. 17: ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಏಕಪಕ್ಷೀಯ ವರ್ತನೆ, ಸರಕಾರದ ಇಬ್ಬಗೆಯ ನೀತಿಯಿಂದ ಕಲ್ಲಡ್ಕದಲ್ಲಿ ನಡೆದ ಇಬ್ಬರ ನಡುವಿನ ವೈಯಕ್ತಿ ಜಗಳ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಶನಿವಾರ ಬಿ.ಸಿ.ರೋಡ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಘಟನೆಯಲ್ಲಿ ಪೊಲೀಸರ ನಿಷ್ಕ್ರೀಯತೆ ಸಾಬೀತಾಗಿದೆ ಎಂದರು.

ಕಲ್ಲಡ್ಕದಲ್ಲಿ ಮೇ 26ರ ಘಟನೆ ನಡೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ತಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ಪರಿಸ್ಥಿತಿಯ ನಿಯಂತ್ರಿಸಲು ಸ್ಥಳದಲ್ಲೇ ಇರುವ ಎಸ್ಪಿಗೆ ನಿರ್ದೇಶನ ನೀಡುವಂತೆ ಸಲಹೆ ನೀಡಿದ್ದೆವು. ಅಲ್ಲದೆ ಈ ಎಸ್ಪಿಯವರನ್ನು ವರ್ಗಾವಣೆಗೊಳಿಸಿ ಬದಲಿ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಘಟನೆಯ ತನಿಖೆಯನ್ನು ನಡೆಸುವಂತೆ ಒತ್ತಾಯಿಸಿದ್ದೆವು. ಆದರೆ ಸರಕಾರದ, ಇಲ್ಲಿನ ಸಚಿವರ ಒತ್ತಡದಿಂದಾಗಿ ಇದನ್ನು ಇಲಾಖೆ ನಿರ್ಲಕ್ಷ್ಯಿಸಿತು ಎಂದರು.

ಕಾಂಗ್ರೆಸ್ ತನ್ನ ವೋಟ್ ಬ್ಯಾಂಕಿಗಾಗಿ ಒಂದು ವರ್ಗವನ್ನು ಓಲೈಸುತ್ತಿದೆ. ನಾವು ಇದುವರೆಗೆ ಶಾಂತಿ ಹಾಗೂ ತಾಳ್ಮೆಯನ್ನು ಕಾಯ್ದುಕೊಂಡಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದ ಅವರು, ಪೊಲೀಸರು ಅಮಾಯಕರನ್ನು ಬಂಧಿಸುವುದನ್ನು ಬಿಟ್ಟು ನೈಜ್ಯ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

24ರಂದು ಸಭೆ: ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಸಂಘಪರಿವಾರದ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಸಭೆಯು ಜೂನ್ 24ರಂದು ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ವಿಧಾನಪರಿಷತ್ತು ಮಾಜಿ ಸದಸ್ಯ ಎ.ಮೋನಪ್ಪ ಭಂಡಾರಿ, ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಜಿತೇಂದ್ರ ಕೊಟ್ಟಾರಿ, ಉಮನಾಥ್ ಕೊಟ್ಯಾನ್, ಬ್ರಿಜೇಶ್ ಚೌಟ, ಕಿರಣ್ ಕುಮಾರ್, ದಿನೇಶ್ ಅಮ್ಟೂರು, ಸುರೇಶ್ ಶೆಟ್ಟಿ ಗುರ್ಮೆ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಹರೀಶ್ ಪೂಂಜಾ, ವಜ್ರನಾಥ್ ಕಲ್ಲಡ್ಕ,  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News