×
Ad

ಕಲ್ಲಡ್ಕ ಘರ್ಷಣೆ; ತನಿಖೆಯಲ್ಲಿ ಪೊಲೀಸರ ತಾರತಮ್ಯ: ಎಸ್‌ಡಿಪಿಐ

Update: 2017-06-17 22:43 IST

ಬಂಟ್ವಾಳ, ಜೂ. 17: ಕಲ್ಲಡ್ಕದಲ್ಲಿ ಮಂಗಳವಾರ ನಡೆದ ಅಹಿತಕರ ಘಟನೆಯ ಬಳಿಕ ಆರೋಪಿಗಳ ಬಂಧನ ಹಾಗೂ ಕಾನೂನು ಕ್ರಮ ಜರಗಿಸುತ್ತಿರುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ಹಿಂದೂ, ಮುಸ್ಲಿಮ್ ಎಂಬ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಆರೋಪಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಶನಿವಾರ ಸಂಜೆ ಪಕ್ಷದ ಬಿ.ಸಿ.ರೋಡ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕದಲ್ಲಿ ಜೂನ್ 13ರಂದು ನಡೆದ ಚೂರಿ ಇರಿತ ಹಾಗೂ ಆ ಬಳಿಕ ನಡೆದ ಗುಂಪು ಘರ್ಷನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಒಟ್ಟು 10 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ ಮುಸ್ಲಿಮ್ ಸಮುದಾಯದ 82 ಜನರ ಮೇಲೆ ಹಾಗೂ ಹಿಂದೂ ಸಮುದಾಯದ ಬರೇ 19 ಜನರ ಮೇಲೆ ದೂರು ದಾಖಲಾಗಿದೆ ಎಂದರು.

ಘಟನೆಗೆ ಸಂಬಂಧಿಸಿ ಈಗಾಗಲೇ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವುಗಳಲ್ಲಿ 9 ಮಂದಿ ಮುಸ್ಲಿಮರಾಗಿದ್ದರೆ 9 ಮಂದಿ ಹಿಂದೂಗಳು. 9 ಮಂದಿ ಮುಸ್ಲಿಮರ ಮೇಲೆ ಐಪಿಸಿ ಕಲಂ 307 (ಕೊಲೆಯತ್ನ) ನಂಥಹ ಕಠಿಣ ಸೆಕ್ಷನ್‌ಗಳನ್ನು ಹಾಕಲಾಗಿದೆ. ಆದರೆ 9 ಮಂದಿ ಹಿಂದೂ ಸಮುದಾಯದವರ ಮೇಲೆ 324 ಸೆಕ್ಷನ್‌ನಂತಹ ದುರ್ಬಲ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಗರ ಠಾಣೆಯಲ್ಲಿ ದಾಖಲಾದ ಒಟ್ಟು 10 ಪ್ರಕರಣಗಳಲ್ಲಿ 32 ಮಂದಿ ಮುಸ್ಲಿಮ್ ಯುವಕರ ಮೇಲೆ 307 ಸೆಕ್ಷನ್ ಹಾಕಲಾಗಿದೆ. ಈ ಗಲಭೆಗೆ ಮೂಲ ಕಾರಣಕರ್ತರಾದ ಸಂಘಪರಿವಾರದ 4 ಮಂದಿಯ ಮೇಲೆ ಮಾತ್ರ 307 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ಟರ ಮಾಲಕತ್ವದ ಕಟ್ಟಡದ ಮೇಲಿನಿಂದ ಸಂಘಪರಿವಾರದ ಕಾರ್ಯಕರ್ತರು ಮಸೀದಿ, ಮದರಸಕ್ಕೆ ಕಲ್ಲು ತೂರಾಟ ನಡೆಸಿ ಅಪಾರ ಹಾನಿಗೊಳಿಸಿದ ಬಗ್ಗೆ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೊಲೀಸರಿಗೆ ದೂರು ನೀಡಿದ್ದರೂ ಆ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನೇ ಒಬ್ಬ ಸಂಘಪರಿವಾರದ ಕಾರ್ಯಕರ್ತರ ಮೇಲೆ ಪೊಲೀಸರು ದೂರು ದಾಖಲಿಸಿಲ್ಲ.ಆದರೆ ಶ್ರೀರಾಮ ಮಂದಿರಕ್ಕೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ 30 ಮಂದಿ ಮುಸ್ಲಿಮರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.

ಚೂರಿ ಇರಿತ ಹಾಗೂ ಗುಂಪು ಘರ್ಷಣೆ ಘಟನೆಯ ಬಳಿಕ ನಿರಪರಾಧಿಗಳಾದ ಮುಸ್ಲಿಮರ ಮನೆಗಳಿಗೆ ಮಹಿಳಾ ಪೊಲೀಸರಿಲ್ಲದೆ ಮಧ್ಯ ರಾತ್ರಿಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಮತ್ತು ಬಂಟ್ವಾಳ ನಗರ ಠಾಣೆಯ ಎಸ್ಸೈ ರಕ್ಷಿತ್ ಎ.ಕೆ. ನೇತೃತ್ವದ ಪೊಲೀಸರ ತಂಡ ನುಗ್ಗಿ ಮಹಿಳೆಯರು, ವೃದ್ಧರು, ರೋಗಿಗಳೆನ್ನದೆ ದೌರ್ಜನ್ಯ ಎಸಗಿದೆ. ದಾಳಿಯ ಸಂದರ್ಭದಲ್ಲಿ ಮನೆಯ ಬಾಗಿಲು, ಕಿಟಕಿಯ ಬಾಗಿಲು ಸಹಿತ ಮನೆಯ ಸೊತ್ತುಗಳನ್ನು ಪೊಲೀಸರು ಹಾನಿಗೊಳಿಸಿದ್ದಾರೆ. ಪೊಲೀಸರ ದಾಳಿಯಿಂದ ಮಾನಸಿಕವಾಗಿ ಜರ್ಜರಿತಗೊಂಡ ಮಹಿಳೆಯರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಸಂತ್ರಸ್ತರು ನೀಡಿರುವ ದೂರನ್ನು ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.


ಘರ್ಷಣೆಯ ವೇಳೆ ಬಂಟ್ವಾಳ ನಗರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ 307 ನಂತಹ ಕಠಿಣ ಸೆಕ್ಷನ್ ಅಡಿಯಲ್ಲಿ 23 ಮಂದಿಯ ಮೇಲೆ ದೂರು ದಾಖಲಾಗಿದ್ದು, ಅವರೆಲ್ಲರೂ ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಸೀದಿ ಮುಂದೆ ಸೇರಿದ ಗುಂಪನ್ನು ಚದುರಿಸಿದ ಬಳಿಕ ಶ್ರೀರಾಮ ವಿದ್ಯಾಕೇಂದ್ರದ ಬಳಿ ಸೇರಿದ್ದ ಗುಂಪನ್ನು ಚದುರಿಸುತ್ತಿದ್ದಾಗ ಎಸ್ಸೈ ಮೇಲೆ ಕಲ್ಲು ತೂರಾಟವಾಗಿದೆ. ಆದರೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಈ ಪ್ರಕರಣವನ್ನು ಪರಿಗಣಿಸಿರುವುದು ಖಂಡನೀಯವಾಗಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಹೇಳಿದರು.

ಕಲ್ಲಡ್ಕ ಘಟನೆ ಪೂರ್ವಯೋಜಿತ ಕೃತ್ಯವಾಗಿದ್ದು ಇದೊಂದು ಕೋಮು ಗಲಭೆ ನಡೆಸುವ ಹುನ್ನಾರವಾಗಿದೆ. ಮೇ 26ರ ಘಟನೆ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಿಗಿ ಧೋರಣೆ ವಹಿಸಿದ್ದರೆ ಹಾಗೂ ಶಾಂತಿ ಸಭೆ ನಡೆಸಿದ್ದರೆ ಜೂನ್ 13ರ ಘಟನೆಯನ್ನು ತಡೆಯಬಹುದಿತ್ತು. ಕಾಂಗ್ರೆಸ್ ರಾಜಕೀಯ ಲಾಭಕ್ಕಷ್ಟೆ ಮುಸ್ಲಿಮರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಕಲ್ಲಡ್ಕ ಘಟನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಘಟನೆಯ ಬಳಿಕ ಎರಡೂ ಸಮುದಾಯದ ಅಮಾಯಕರನ್ನು ಬಂಧಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೌನ ಮುರಿಯಬೇಕು ಎಂದು ಹೇಳಿದ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಕಲ್ಲಡ್ಕದಲ್ಲಿ ನಡೆದ ಎರಡೂ ಘಟನೆಯನ್ನು ನ್ಯಾಯೋಚಿತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಸಜಿಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜಿಪ, ಎಸ್‌ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News