ಪ್ರಶಾಂತ್ ಕೊಲೆ ಪ್ರಕರಣ: ಆರೋಪಿಗಳಿಂದ ಸ್ಥಳ ಮಹಜರು
ಮೂಡುಬಿದಿರೆ, ಜೂ.17: ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ನ್ಯಾಯಾಲಯಕ್ಕೆ ಶರಣಾಗಿದ್ದ ನಾಲ್ವರು ಆರೋಪಿಗಳನ್ನು ಶನಿವಾರ ಕೊಲೆ ನಡೆದ ಸ್ಥಳಕ್ಕೆ ಕರೆತಂದು ಪೊಲೀಸರರು ಸ್ಥಳ ಮಹಜರು ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಸ್ಥಳಗಳಿಗೆ ಕರೆದೊಯ್ದಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಆರೋಪಿಗಳು ಕೃತ್ಯಕ್ಕೆ ಬಳಸಿದ ಹಲವು ವಸ್ತುಗಳು ದೊರೆಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳನ್ನು ಪೋಲಿಸರು ಗುರುತಿಸಿದ್ದು, ಈ ಪೈಕಿ ಅಕ್ಬರ್ ವಳಚ್ಚಿಲ್, ಸಿರಾಜ್ ಉಳ್ಳಾಲ್, ಅನ್ವರ್ ಬಜಪೆ ಮತ್ತು ತಾಜುದ್ದೀನ್ ಬಜಪೆ ಕೆಲ ದಿನಗಳ ಹಿಂದೆ ಮೂಡಬಿದ್ರೆ ನ್ಯಾಯಾಲಯಕ್ಕೆ ಶರಣಾಗಿದ್ದರು.
ನ್ಯಾಯಾಲಯಕ್ಕೆ ಶರಣಾದ ನಾಲ್ವರು ಆರೋಪಿಗಳನ್ನುಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಸಂದರ್ಭ ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್, ಬಟ್ಟೆ, ಮತ್ತಿತರ ವಸ್ತುಗಳನ್ನು ಬೇರೆಡೆ ಅಡಗಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದು, ಆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2015 ಅ.9 ರಂದು ಇಲ್ಲಿನ ಹೂವಿನ ವ್ಯಾಪಾರಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ನಡೆದಿತ್ತು.