ಅಪರಾಧಿಗಳು ಮತ್ತು ಬಲಿಪಶುಗಳ ಹಕ್ಕುಗಳನ್ನು ಸಮಾನವಾಗಿ ಪರಿಗಣಿಸಬೇಕು:ನ್ಯಾಯಾಲಯ

Update: 2017-06-18 11:53 GMT

ಹೊಸದಿಲ್ಲಿ,ಜೂ.18: ಲೂಟಿ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿವಿಧ ಅವಧಿ ಗಳ ಜೈಲುಶಿಕ್ಷೆಯನ್ನು ಘೋಷಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು, ಶಿಕ್ಷೆಯನ್ನು ವಿಧಿಸುವಾಗ ಅಪರಾಧಿಯ ಹಕ್ಕುಗಳಿಗೆ ಸಮಾನವಾಗಿ ಬಲಿಪಶುವಿನ ಹಕ್ಕುಗಳನ್ನೂ ಪರಿಗಣಿಸಬೇಕು ಎಂದು ಹೇಳಿದೆ.

ನ್ಯಾ.ಸುಖ್ವಿಂದರ್ ಕೌರ್ ಅವರು ನರೇಶ ಎಂಬಾತನಿಗೆ ಏಳು ವರ್ಷ ಮತ್ತು ಆತನ ಸಹಚರರಾದ ಪ್ರದೀಪ್ ಮತ್ತು ಗೌರವ್ ಅವರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತಲ್ಲದೆ, ಈ ಅಪರಾಧಿಗಳು ಯಾವುದೇ ಅನುಕಂಪಕ್ಕೆ ಅರ್ಹರಾಗಿಲ್ಲ ಎಂದು ಹೇಳಿದರು. ಅವರಿಗೆ ತಲಾ 7,000 ರೂ.ಗಳ ದಂಡವನ್ನೂ ನ್ಯಾಯಾಲಯವು ವಿಧಿಸಿತು.

 ಸೂಕ್ತ ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯವು ಅಪರಾಧಿಗಳ ಹಕ್ಕುಗಳನ್ನು ಮಾತ್ರವಲ್ಲ, ಅಪರಾಧ ಕೃತ್ಯದ ಬಲಿಪಶುಗಳ ಮತ್ತು ಸಮಾಜದ ಹಕ್ಕುಗಳನ್ನೂ ಅಷ್ಟೇ ಪ್ರಮುಖವಾಗಿ ಪರಿಗಣಿಸಬೇಕು ಎಂದು ನ್ಯಾ.ಕೌರ್ ಹೇಳಿದರು.

2012,ಡಿಸೆಂಬರ್‌ನಲ್ಲಿ ಈ ಮೂವರು ಸೇರಿಕೊಂಡು ಸೌರಭ್ ಮತ್ತು ಹೃತ್ವಿಕ್ ಎನ್ನುವವರಿಗೆ ಚೂರಿ ತೋರಿಸಿ ಅವರ ಮೊಬೈಲ್ ಫೋನ್‌ಗಳು, ಹಣ ಮತ್ತು ವಾಚ್‌ನ್ನು ದೋಚಿದ್ದರು. ಪ್ರತಿಭಟಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿಗಳಲ್ಲೋರ್ವ ಸೌರಭ್‌ಗೆ ಹೊಟ್ಟೆ ಮತ್ತು ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದ. ಅವರು ಬೊಬ್ಬೆ ಹೊಡೆದಾಗ ಧಾವಿಸಿ ಬಂದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ತಾವು ಅಮಾಯಕರು ಮತ್ತು ತಮ್ಮನ್ನು ಸುಳ್ಳೇ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಿಚಾರಣೆ ವೇಳೆ ಈ ಮೂವರು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News