ಪಜೀರು ಗೋವನಿತಾಶ್ರಯದಲ್ಲಿ ಬನಶಂಕರಿ ಆರಾಧನೆ: ಕೆರೆ ಲೋಕಾರ್ಪಣೆ

Update: 2017-06-18 13:53 GMT

ಕೊಣಾಜೆ, ಜೂ. 18: ಪಜೀರು ಬೀಜಗುರಿಯ ಗೋವನಿತಾಶ್ರಯ ಟ್ರಸ್ಟ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ನಂದಿನಿ ಪುಷ್ಕರಿಣಿ ಕೆರೆ ಲೋಕಾರ್ಪಣೆ ಹಾಗೂ ಬನಶಂಕರಿ ಆರಾಧನೆ ಕಾರ್ಯಕ್ರಮವು ರವಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ ಅವರು, ಗೋವಿನ ಸಂರಕ್ಷಣೆಗಾಗಿ ನಾವೆಲ್ಲರೂ ಕಟಿಬದ್ದರಾಗಿದ್ದುಕೊಂಡು ಗೋವಿನಿಂದ ತಯಾರಿಸ್ಪಡುವ ವಸ್ತುಗಳನ್ನ ಬಳಕೆ ಮಾಡಬೇಕು. ಮಾತ್ರವಲ್ಲದೆ ನಮ್ಮ ಒಂದು ಹೊತ್ತಿನ ಅನ್ನವನ್ನಾದರೂ ಗೋಸೇವೆಗಾಗಿ ಮೀಸಲಿಡಬೇಕಾಗಿದೆ. ಭಾರತ ದೇಶದ ಉದ್ದಕ್ಕೂ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದರೆ ಅದಕ್ಕಿಂತ ಸಂಭ್ರಮ ಕ್ಷಣಗಳು ಬೇರೆ ಇಲ್ಲ. ನಾವು ಗೋವನ್ನು ಮಾತೆಯ ರೂಪದಲ್ಲಿ ಕಾಣುತ್ತಿರುವುದರಿಂದ ಸರಕಾರವು ಗೋವನ್ನು ರಾಷ್ಟ್ರಮಾತೆಯಾಗಿ ಘೋಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೋಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ, ಪಜೀರಿನ ಗೋವನಿತಾಶ್ರಯ ಟ್ರಸ್ಟ್ ಕಳೆದ ಹದಿನೆಂಟು ವರ್ಷಗಳಿಂದ ಗೋಪಾಲಕೃಷ್ಣನ ಆರಾಧನೆಯೊಂದಿಗೆ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ಆದ್ದರಿಂದ ನಾವೆಲ್ಲರೂ ಗೋವಿನ ಸೇವೆಗೆ ನಮ್ಮಲ್ಲಾದ ಸಹಕಾರ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿ ಶ್ರೀಧರ್ ಭಟ್ ಅವರು ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸೇವೆಯಲ್ಲಿ ಸಹಕರಿಸಿದ ಸ್ಟೀವನ್ ಲಾಯ್ ಡಿಸೋಜ ಹಾಗೂ ಗಿರಿಧರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಟ್ರಸ್ಟಿ ಹಿತೇಂದ್ರ ಶಾ, ಸಮಾಜಸೇವಕ ಚಂದ್ರಹಾಸ್ ಪೂಂಜಾ, ಟ್ರಸ್ಟಿ ಡಾ.ಅನಂತಲಕ್ಷ್ಮೀ ಭಟ್ ಉಪಸ್ಥಿತರಿದ್ದರು.

ಗೋವನಿತಾಶ್ರಯ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅನಂತ ಕೃಷ್ಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ತುಳಜಾರಾಂ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News