ಜರ್ಮನಿ ಮೂಲದ ಹುಡುಗಿಯನ್ನು ವಿವಾಹವಾದ ಉಡುಪಿ ಯುವಕ

Update: 2017-06-18 15:27 GMT

ಪಡುಬಿದ್ರೆ,ಜೂ.18: ಉಡುಪಿ ಜಿಲ್ಲೆಯ ಹೆಜಮಾಡಿಯ ಭರತ್‌ ಕುಮಾರ್ ಎಂಬವರು ಜರ್ಮನ್ ಮೂಲದ ರೆಬೆಕಾ ಮರಿಯಾ ಒಪಿಟ್ಜ್‌ ರೊಂದಿಗೆ ರವಿವಾರ ಉಡುಪಿಯ ಶಾಮಿಲಿ ಸಭಾಂಗಣದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು.

ಉಡುಪಿ ಜಿಲ್ಲೆಯ ಹೆಜಮಾಡಿ ಕರ್ಕೇರ ಕಂಪೌಂಡ್‌ನ ಮಾತಾ ಅಮೃತ ಕೃಪಾ ನಿವಾಸಿಗಳಾದ ಕರುಣಾಕರ ಕರ್ಕೇರ-ಶಾರದಾ ದಂಪತಿಯ ಪುತ್ರ ಭರತ್‌ಕುಮಾರ್ ವಿದೇಶಿ ಮೂಲದ ಪ್ರವಾಸಿ ಹಡಗಿನಲ್ಲಿ ಉದ್ಯೋಗದಲ್ಲಿದ್ದು, ಅದೇ ಹಡಗಿನಲ್ಲಿ ರೆಬೆಕಾ ಆರ್ಟ್ ಗ್ಯಾಲರಿಸ್ಟ್ ಆಗಿದ್ದರು. ಹೆಜಮಾಡಿಯ ಭರತ್ ಮನೆಯಲ್ಲಿ ಜೂನ್ 16 ರಂದು ಮೆಹಂದಿ ಕಾರ್ಯಕ್ರಮ ಆಚರಿಸಿದ್ದು, ತುಳುನಾಡಿನ ಪದ್ಧತಿಯಂತೆ ಸೀರೆ ಹಾಗೂ ಕರಿಮಣಿ ತಾಳಿ ಕಟ್ಟಿ ಸಾಂಪ್ರದಾಯದಂತೆ ಮದುವೆ ನಡೆಯಿತು.

ಹೆಜಮಾಡಿಯ ಹರಿದಾಸ್ ಭಟ್ ನೇತೃತ್ವದ ಪುರೋಹಿತರ ತಂಡ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಿಸಿದರು. ಫ್ರಾಂಕ್‌ಫರ್ಟ್‌ನ ದಿ.ಮೋನಿಕಾ ಮೂಕ್ ಒಪಿಟ್ಜ್ ಮತ್ತು ದಿ.ಅಲ್ರಿಚ್ ಒಪಿಟ್ಜ್ ದಂಪತಿಯ ಪುತ್ರಿ ರೆಬೆಕಾರವರ ಅಕ್ಕ, ಬಾವ, ಚಿಕ್ಕಮ್ಮ ಹಾಗೂ ಸುಮಾರು 11 ಮಂದಿ ಜರ್ಮನ್ ಅತಿಥಿಗಳು ಹಾಗೂ ಭರತ್ ಸಂಬಂಧಿಕರು, ಸ್ನೇಹಿತರು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

ಜೂ.19 ಮಂಗಳೂರಿನ ಸುಲ್ತಾನ್‌ಬತ್ತೇರಿಯಲ್ಲಿ ಜರ್ಮನಿ ಗೆಳೆಯರಿಗಾಗಿ ಪ್ರತ್ಯೇಕ ಸಮಾರಂಭ ಆಯೋಜಿಸಲಾಗಿದ್ದು, ಅಂದು ಜರ್ಮನ್ ಸಂಪ್ರದಾಯದಂತೆ ಉಡುಗೆ ತೊಡುವುದಾಗಿ ರೆಬೆಕಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News