ಪೋರ್ಚುಗಲ್‌ನಲ್ಲಿ ಭೀಕರ ಕಾಡ್ಗಿಚ್ಚು; ಕನಿಷ್ಠ 62 ಸಾವು

Update: 2017-06-18 15:03 GMT

ಅವೆಲಾರ್ (ಪೋರ್ಚುಗಲ್), ಜೂ. 18: ಮಧ್ಯ ಪೋರ್ಚುಗಲ್‌ನಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿಗೆ ಕನಿಷ್ಠ 62 ಮಂದಿ ಬಲಿಯಾಗಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರ ರವಿವಾರ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪೋರ್ಚುಗಲ್ ಮೂರು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಿದೆ.

ಪೆಡ್ರಗಾವ್ ಗ್ರಾಂಡ್ ಎಂಬ ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಕಾಣಿಸಿಕೊಂಡ ಬೆಂಕಿ ಸಂಜೆಯ ವೇಳೆಗೆ ಹಲವಾರು ಪ್ರದೇಶಗಳಿಗೆ ವೇಗವಾಗಿ ಹರಡಿತು. ಬೆಂಕಿಯನ್ನು ನಿಯಂತ್ರಿಸಲು ರಾತ್ರಿಯ ವೇಳೆಗೆ ಸುಮಾರು 600 ಅಗ್ನಿಶಾಮಕ ಸಿಬ್ಬಂದಿ ಮತ್ತು 160 ಅಗ್ನಿಶಾಮಕ ವಾಹನಗಳನ್ನು ಕಳುಹಿಸಿಕೊಡಲಾಯಿತು.

‘‘ದುರದೃಷ್ಟವಶಾತ್ ಇದು ನಾವು ಅರಣ್ಯ ಬೆಂಕಿಯ ರೂಪದಲ್ಲಿ ಇತ್ತೀಚಿನ ವರ್ಷಗಳಲ್ಲಿ ನೋಡಿದ ಅತ್ಯಂತ ದೊಡ್ಡ ದುರಂತವಾಗಿದೆ’’ ಎಂದು ಪ್ರಧಾನಿ ಆಂಟೋನಿಯೊ ಕೋಸ್ಟ ಹೇಳಿದರು.

ಪೋರ್ಚುಗಲ್‌ನ ಹಲವು ಭಾಗಗಳಲ್ಲಿ ಶನಿವಾರ ತೀವ್ರ ಉಷ್ಣ ಅಲೆಗಳು ಬೀಸಿದವು. ಹಲವು ವಲಯಗಳಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ದಾಟಿತು.

ರಾತ್ರಿಯ ವೇಳೆ ದೇಶಾದ್ಯಂತ 60 ಕಡೆಗಳಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿತು. ಬೆಂಕಿ ನಂದಿಸಲು 1,700ಕ್ಕೂ ಅಧಿಕ ಅಗ್ನಿಶಾಮಕರು ಹೋರಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News