ಪ್ರಭಾಕರ ಭಟ್ ಗಲಭೆಗೆ ಕಾರಣವಾಗಿದ್ದರೆ ಈಗಾಗಲೇ ಬಂಧಿಸಬೇಕಾಗಿತ್ತು: ಕುಮಾರಸ್ವಾಮಿ

Update: 2017-06-18 15:09 GMT

ಮಂಗಳೂರು, ಜೂ.18: ಕಲ್ಲಡ್ಕ ಪ್ರಭಾಕರ ಭಟ್ ಕಲ್ಲಡ್ಕದ ಗಲಭೆಗೆ ಕಾರಣವಾಗಿದ್ದರೆ ಈಗಾಗಲೇ ಬಂಧಿಸಬೇಕಾಗಿತ್ತು. ಅದರ ಬದಲು ಮಾಧ್ಯಮಗಳಿಗೆ ಹೇಳಿಕೆ ನೀಡಿ ಚಟ ತೀರಿಸಿಕೊಳ್ಳಬಾರದು. ಬಂಧಿಸಲು ಸೂಕ್ತ ಆಧಾರವಿದ್ದರೆ ಈ ಬಗ್ಗೆ ಸಚಿವರು ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದರೆ ಅದು ಸಚಿವರ ಅಧಿಕಾರದ ದುರಪಯೋಗ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣವಿಲ್ಲದೆ ವ್ಯಕ್ತಿಯೊಬ್ಬನನ್ನು ಬಂಧಿಸಲು ಸೂಚನೆ ನೀಡಿದರೆ ಮಾತ್ರ ಅದನ್ನು ಅಧಿಕಾರದ ದುರುಪಯೋಗ ಎನ್ನಬಹುದು. ಕಲ್ಲಡ್ಕದ ಗಲಭೆ ಪ್ರಕರಣಕ್ಕೆ ಕಾರಣವಾಗುವ ವಿಚಾರದಲ್ಲಿ ಸೂಕ್ತ ಆಧಾರವಿದ್ದರೆ ಯಾವುದೇ ವ್ಯಕ್ತಿಯ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ವಿಳಂಬ ಮಾಡಲು ಕಾರಣವೇನು ಎಂದವರು ಪ್ರಶ್ನಿಸಿದರು.

ಕಲ್ಲಡ್ಕ ಗಲಭೆಗೆ ಕಾಂಗ್ರೆಸ್-ಬಿಜೆಪಿ ಸಮಾನ ಹೊಣೆ: ಕಲ್ಲಡ್ಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಶಾಂತಿ, ಗಲಭೆಯ ವಾತಾವರಣಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸಮಾನ ಹೊಣೆ ಹೊರಬೇಕಾಗುತ್ತದೆ. ಜಿಲ್ಲೆಯಲ್ಲಿ ಚುನಾವಣೆ ಹತ್ತಿರ ಬರುತ್ತಿರುವಂತೆ ಕೋಮು ದ್ವೇಷದ ವಾತಾವರಣ ಸೃಷ್ಟಿಸಲು ಮ್ಯಾಚ್ ಫಿಕ್ಸಿಂಗ್ ರೀತಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಡೆದುಕೊಳ್ಳುತ್ತಿವೆ. ಜನಸಾಮನ್ಯರಿಗೆ ರಕ್ಷಣೆ ನೀಡಬೇಕಾದ ಹೊಣೆಗಾರಿಕೆ ಆಡಳಿತ ನಡೆಸುವ ಪಕ್ಷಗಳ ಮೇಲಿದೆ. ಈ ನಿಟ್ಟಿನಲ್ಲಿ ಇಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ವಿಫಲವಾಗಿವೆ. ರಮಝಾನ್ ತಿಂಗಳಲ್ಲಿ ಜನರಿಗೆ ತೊಂದರೆ ನೀಡುವ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ. ಗಲಭೆಗ ಕಾರಣರಾಗುವವರ ವಿರುದ್ಧ ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಅಶಾಂತಿಯ ವಾತಾವರಣಕ್ಕೆ ಅವಕಾಶ ನೀಡಬಾರದು ಎಂದು ಕುಮಾರ ಸ್ವಾಮಿ ಆಗ್ರಹಿಸಿದರು.

ವಿಧಾನ ಪರಿಷತ್ ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ಬೆಂಬಲ ಅನಿರೀಕ್ಷಿತವಲ್ಲ: ಮೂರು ವರ್ಷಗಳ ಹಿಂದೆಯೇ ವಿಧಾನ ಪರಿಷತ್‌ನ ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಎಂದು ಒಪ್ಪಂದವಾಗಿತ್ತು, ಅದರಂತೆ ನಡೆದುಕೊಂಡಿದ್ದೇವೆ. ಇದೀಗ ಕಾಂಗ್ರೆಸ್ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಜೆಡಿಎಸ್ ಜೊತೆ ಚರ್ಚಿಸಿ ತೆಗೆದುಕೊಂಡ ತೀರ್ಮಾನವಲ್ಲ. ಈ ಹಿಂದೆ ಜೆಡಿಎಸ್ ಡಿ.ಎಚ್.ಶಂಕರಮೂರ್ತಿಗೆ ಬೆಂಬಲ ನೀಡಿದ್ದ ಕಾರಣ ಕಾಂಗ್ರೆಸ್ ಮಂಡಿಸಿದ್ದ ನಿರ್ಣಯಕ್ಕೆ ಪರಾಭವ ಆಗಿದೆ ಎಂದು ಕುಮಾರ ಸ್ವಾಮಿ ಹೇಳಿದರು.

ಯಡಿಯೂರಪ್ಪ ಶಂಕರಮೂರ್ತಿ ಗೆಲುವಿಗೆ ಪ್ರಯತ್ನಿಸಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಡಿ.ಎಚ್.ಶಂಕರಮೂರ್ತಿಯನ್ನು ಬೆಂಬಲಿಸಲು ಜೆಡಿಎಸ್‌ನ್ನು ಸಂಪರ್ಕಿಸಿಲ್ಲ. ಅವರಿಗೆ ಶಂಕರಮೂರ್ತಿ ಸೋಲಬೇಕೆಂಬ ಯೋಚನೆ ಇದ್ದಂತೆ ಕಾಣುತ್ತದೆ. ಆದರೆ ಅವರ ಲೆಕ್ಕಾಚಾರದಂತೆ ನಡೆದಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಇಲ್ಲ. ನಂಜನಗೂಡು ಚುನಾವಣೆಯ ಸಂರ್ಭದಲ್ಲಿ ಜೆಡಿಎಸ್‌ಗೆ ಕೃತಜ್ಞತೆ ಹೇಳಿರುವ ಸಿದ್ದರಾಮಯ್ಯ ಈಗ ಜೆಡಿಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ.ಆದರೆ ಸಿದ್ದರಾಮಯ್ಯ ರಾಜ್ಯ ಕಂಡ ಜಾತಿವಾದಿ ಮುಖ್ಯಮಂತ್ರಿ ಎಂದು ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಜೆಡಿಎಸ್ ವಕ್ತಾರ ಬೋಜೇಗೌಡ, ಎಂ.ಬಿ.ಸದಾಶಿವ, ವಸಂತ ಪೂಜಾರಿ, ಧನರಾಜ್, ಅಕ್ಷಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News