ಕೊಲ್ಲೂರು: ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಕೊಲ್ಲೂರು, ಜೂ.18: ಉಡುಪಿ ಜಿಲ್ಲೆಗೆ ಇದೇ ಮೊದಲ ಬಾರಿ ಆಗಮಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೊಲ್ಲೂರಿಗೆ ಭೇಟಿ ನೀಡಿ ಶ್ರೀಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉಡುಪಿ ಪ್ರವಾಸಿ ಮಂದಿರದಲ್ಲಿ ಭೋಜನ ಮುಗಿಸಿ ವಿಶ್ರಾಂತಿ ಪಡೆದು ಅಪರಾಹ್ನ 2:00ಗಂಟೆಗೆ ಕೊಲ್ಲೂರಿಗೆ ತೆರಳಿದ ರಾಷ್ಟ್ರಪತಿಗಳನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ, ಸಹಾಯಕ ಕಾರ್ಯನಿರ್ವಹಣಾ ಧಿಕಾರಿ ಕೃಷ್ಣಮೂರ್ತಿ, ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ ಸೇರಿದಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು ಪೂರ್ಣಕುಂಭ ಸ್ವಾಗತ ನೀಡಿ ಬರ ಮಾಡಿಕೊಂಡರು.
ದೇವಸ್ಥಾನದಲ್ಲಿ ಸುಮಾರು 20 ನಿಮಿಷಗಳ ಕಾಲ ಇದ್ದ ರಾಷ್ಟ್ರಪತಿಗಳು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ, ಕಾಣಿಕೆ ಅರ್ಪಿಸಿದರು. ಈ ಸಂದರ್ಭ ದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರುದ್ರಪ್ಪ ಲಮ್ಹಾಣಿ, ಪ್ರಮೋದ್ ಮದ್ವರಾಜ್, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ,ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಗಾಧಿಕಾರಿ ಶಿಲ್ಪಾನಾಗ್, ಐಜಿಪಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ, ಉದ್ಯಮಿ ಬಿ.ಆರ್.ಶೆಟ್ಟಿ, ದೇವಸ್ಥಾನದ ಅರ್ಚಕರಾದ ಮಂಜುನಾಥ ಅಡಿಗ, ನರಸಿಂಹ ಅಡಿಗ, ಶ್ರೀಧರ ಅಡಿಗ, ಗೋವಿಂದ ಅಡಿಗ ಮುಂತಾದವರು ಉಪಸ್ಥಿತರಿದ್ದರು.
ಅಪರಾಹ್ನ 2ಗಂಟೆಗೆ ಹೆಮ್ಮಾಡಿಯಿಂದ ಕೊಲ್ಲೂರು ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಇಡೀ ಪರಿಸರ ನಿರ್ಜನ, ನಿರ್ಜೀವವಾಗಿತ್ತು. ಕೊಲ್ಲೂರು ದೇವಿ ದರ್ಶನಕ್ಕೆ ಬಂದ ತಮಿಳುನಾಡು ಮತ್ತು ಕೇರಳದ ಭಕ್ತರು ಕುಂದಾಪುರದಲ್ಲಿ ತಡೆಹಿಡಿಯಲ್ಪಟ್ಟು ಪರದಾಡುವಂತಾಯಿತು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಸ್ವಂತ ವಾಹನದಲ್ಲಿ ತೆರಳುವವರಿಗೆ ಕಿರಿಕಿರಿಯಾಯಿತು.