ತಜ್ಞ ವೈದ್ಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಅವಕಾಶ: ಸಚಿವ ರಮೇಶ್‌ಕುಮಾರ್

Update: 2017-06-18 15:35 GMT

ಉಡುಪಿ, ಜೂ.18: ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ತಜ್ಞ ವೈದ್ಯರ ಕೊರತೆಯನ್ನು ತುಂಬುವುದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ಸರಕಾರ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ, ಸೂಪರ್ ಸ್ಪೆಷಾಲಿಟಿ ಸೌಲಭ್ಯ ಗಳನ್ನು ಒದಗಿಸಲಿದ್ದು, ಅಲ್ಲಿ ತಜ್ಞ ವೈದ್ಯರು ಬಂದು ಸೇವೆ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ಎನ್‌ಆರ್‌ಐ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರು ಬಿಆರ್‌ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿ. ಮೂಲಕ ಉಡುಪಿ ಕೆಎಂ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಾಗದಲ್ಲಿ ನಿರ್ಮಿಸಲಿರುವ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಈ ಮೂಲಕ ತಜ್ಞ ವೈದ್ಯರು ಈ ಸೌಲಭ್ಯಗಳನ್ನು ಬಳಸಿಕೊಂಡು ಜನರಿಗೆ ಸೇವೆ ಒದಗಿಸಲು ಮುಕ್ತ ಅವಕಾಶ ಸಿಗಲಿದೆ. ಆದರೆ ಈ ಕಟ್ಟಡ ಜಿಲ್ಲಾಸ್ಪತ್ರೆ ಆವರಣದಲ್ಲೇ ಇರುತ್ತದೆ. ಇಲ್ಲಿ ನಿಮಗೆ ಬೇಕಾದ ಎಲ್ಲಾ ಸುಸಜ್ಜಿತ ಉಪಕರಣ ಲಭ್ಯವಿರುತ್ತದೆ. ಈ ಮೂಲಕ ಜನಸಾಮಾನ್ಯರಿಗೂ ಉನ್ನತ ಆರೋಗ್ಯ ಸೇವೆ ದೊರೆಯಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದರು.

ಉಡುಪಿಯಲ್ಲಿ ಈಗಿರುವ 70 ಹಾಸಿಗೆಗಳ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯಾಗಿ ಬಿ.ಆರ್.ಶೆಟ್ಟಿ ನಿರ್ಮಿಸಿಕೊಡಲಿದ್ದಾರೆ. ಇಲ್ಲಿ ಈಗಿರುವಂತೆ ಉಚಿತ ಸೇವೆ ದೊರೆಯಲಿದೆ. ಅಲ್ಲದೇ ಅವರು 400 ಹಾಸಿಗೆಗಳ ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆ ನಿರ್ಮಿಸುವರು. ಇಲ್ಲೂ ಬಡವರಿಗೆ ಈ ಸೌಲಭ್ಯ ಉಚಿತವಾಗಿ ದೊರೆಯಲಿದೆ ಎಂದವರು ಹೇಳಿದರು.


ನಾವು ಖಾಸಗಿಯವರ ಸಹಾಯ ತೆಗೆದುಕೊಳ್ಳುವುದೇ ಹೊರತು ಆಸ್ಪತ್ರೆ ಯನ್ನು ಖಾಸಗೀಕರಣಗೊಳಿಸುತ್ತಿಲ್ಲ. ಬಿ.ಆರ್.ಶೆಟ್ಟರು ಪುಣ್ಯದ ಕೆಲಸಕ್ಕೆ ಬಂದಿದ್ದಾರೆ, ವ್ಯಾಪಾರದ ಗುರಿಯೊಂದಿಗೆ ಬಂದಿಲ್ಲ ಎಂದು ಸಚಿವ ರಮೇಶ್ ಕುಮಾರ್, ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯನ್ನು 4 ಎಕರೆ ಜಾಗದೊಂದಿಗೆ ಖಾಸಗಿಗೆ ಹಸ್ತಾಂತರಿಸಿರುವುದನ್ನು, ಶೆಟ್ಟರನ್ನು ಸಮರ್ಥಿಸಿಕೊಂಡರು.

ಒಣಪ್ರತಿಷ್ಠೆಯನ್ನು ಬದಿಗಿಟ್ಟು, ಬಡವರು ಸೇರಿದಂತೆ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟು, ಸರಕಾರದ ಕ್ರಮಕ್ಕೆ ಬೆಂಬಲಿಸುವಂತೆ ವಿರೋಧಿಗಳಿಗೆ ಮನವಿ ಮಾಡಿದ ಅವರು, ಬಿ.ಆರ್.ಶೆಟ್ಟಿ ದಂಪತಿಗಳ ಜನರ ಸೇವೆಗೆ ನಿಮ್ಮ ಸಹಕಾರ ನೀಡಿ ಎಂದರು. ಸರಕಾರ ಈಗಾಗಲೇ ಐದು ಜಿಲ್ಲೆಗಳಿಗೆ ಸೂಪರ್ ಸ್ಪೆಷ್ಪಾಲಿಟಿ ಆಸ್ಪತ್ರೆಯನ್ನು ಘೋಷಿಸಿದೆ ಎಂದು ಸಚಿವರು ನುಡಿದರು.


ಆಶೀರ್ವಚನ ನೀಡಿದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಕಳೆದ ಐದು ವರ್ಷ ಕಾಲ ರಾಷ್ಟ್ರಪತಿ ಹುದ್ದೆಯಲ್ಲಿದ್ದು, ಅತ್ಯುತ್ತಮ ಸೇವೆ ಸಲ್ಲಿಸಿದ ಪ್ರಣವ್ ಮುಖರ್ಜಿ ಅವರು ಇದೀಗ ಕೃಷ್ಣಾರ್ಪಣಕ್ಕೆ ಉಡುಪಿಗೆ ಬಂದಿದ್ದಾರೆ. ಕೃಷ್ಣನ ಸಂಪೂರ್ಣ ಅನುಗ್ರಹ ಅವರ ಮೇಲಿದೆ ಎಂದರು.
ಬಿ.ಆರ್.ಶೆಟ್ಟಿ ಅವರು ಆಸ್ಪತ್ರೆಯ ಮೂಲಕ ಬಡಜನರ ಸೇವೆಯ ಸಂಕಲ್ಪದೊಂದಿಗೆ ಕಾರ್ಯತತ್ಪರರಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ಬಡಜನರಿಗೆ ಉಚಿತ ಸೇವೆಯ ಭರವಸೆ ನೀಡಿದ್ದಾರೆ.ಇಲ್ಲಿ ಜನರಿಗೆ ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದು ಸ್ವಾಮೀಜಿ ಹಾರೈಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News