ಉಡುಪಿಯಲ್ಲಿ ತಯಾರಿಸಿದ ವಿವಿಧ ಖಾದ್ಯ ಸವಿದ ರಾಷ್ಟ್ರಪತಿ

Update: 2017-06-18 15:49 GMT

ಉಡುಪಿ, ಜೂ.18: ಉಡುಪಿಗೆ ಇಂದು ಮೊದಲ ಬಾರಿಗೆ ಆಗಮಿಸಿ ಬನ್ನಂಜೆಯ ಪ್ರವಾಸಿ ಮಂದಿರದ ವಿಶೇಷ ಕೊಠಡಿಯಲ್ಲಿ ವಿಶ್ರಾಂತಿ ಪಡೆದಿದ್ದ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಜಭವನದ ಮೆನು ಪ್ರಕಾರ ಉಡುಪಿಯ ಓಶಿಯನ್ ಪರ್ಲ್ ಹೊಟೇಲಿನಲ್ಲಿ ತಯಾರಿಸಲಾದ ಚಹಾ, ತಿಂಡಿ, ಊಟವನ್ನು ನೀಡಲಾಯಿತು.ಎರಡು ದಿನಗಳ ಹಿಂದೆ ರಾಷ್ಟ್ರಪತಿ ಭವನದಿಂದ ಬಂದ ಮೆನು ಪ್ರಕಾರ ಆಹಾರವನ್ನು ತಯಾರಿಸಲಾಗಿದೆ.

ನಿರ್ದೇಶನದ ಪ್ರಕಾರ ಹುಳಿ ಇಲ್ಲದ, ಕಚ್ಚಾ ಆಲಿವ್ ಎಣ್ಣೆ, ಉಗುರು ಬೆಚ್ಚನೆ ನೀರಿನಲ್ಲಿ ಆಹಾರವನ್ನು ತಯಾರಿಸಲಾಗಿದೆ. ಓಶಿಯನ್ ಪರ್ಲ್‌ನ ಮುಖ್ಯ ಬಾಣಸಿಗ ಬಾಮ್ ಬಹದ್ದೂರ್ ಈ ಎಲ್ಲ ಆಹಾರಗಳನ್ನು ತಯಾರಿಸಿದ್ದಾರೆ. ರಾಜಭವನದ ಆಹಾರ ತಜ್ಞರ ತಂಡದ ಡಾ. ವಾಸುದೇವ್ ಮತ್ತು ವೆಂಕಿದೇಶ್ ಆಹಾರವನ್ನು ಪರೀಕ್ಷಿಸಿದರು.

ಬೆಳಗ್ಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಗ್ರೀನ್‌ಮಿಂಟ್ ಚಹಾವನ್ನು ಸವಿದರು. ಮಧ್ಯಾಹ್ನ ಊಟಕ್ಕೆ ವಿರ್ಗಿನ್ ಮೊಜಿಟೋ ಪಾನೀಯ, ವಿಜಿಟೆಬಲ್ ಟಾರ್ಟಿಲ್ಲ ಸೂಪು, ಸಲಾಡ್‌ನಲ್ಲಿ ಪಂಝನೆಲ್ಲಾ ಸಲಾಡ್, ಸಿಟ್ರಸ್ ಗ್ರೀನ್ ವೆಜ್ ಸಲಾಡ್, ಮುಖ್ಯ ಆಹಾರದಲ್ಲಿ ಚಾರ್ ಗ್ರೀಲ್‌ಲ್ಡ್ ವೆಜಿಟೇಬಲ್, ವಿಜಿಟೇರಿಯನ್ ಕಸ್ಸೊಲೆಟ್, ಮ್ಯಾಕ್ರೋನಿ ಅಗಿಲೋ ಒಲಿಯೋ, ಬ್ರೇಝಿಲಿಯನ್ ರೈಸ್, ಲೈವ್ ಪುಲ್ಕ, ಸಿಹಿ ತಿಂಡಿಯಲ್ಲಿ ಕಟ್ ಫ್ರುಟ್ಸ್ ಪ್ಯಾಟ್ಟರ್, ಶುಗರ್ ಫ್ರೀ ಪ್ಲಾನ್ ಯೋಗರ್ಟ್‌ನ್ನು ಸೇವಿಸಿದರು.

‘ರಾಷ್ಟ್ರಪತಿ ದಾಲ್ ಫುಲ್ಕವನ್ನು ಹೊರತು ಪಡಿಸಿ ನಾವು ತಯಾರಿಸಿ ಬಡಿಸಿದ ಎಲ್ಲ ಆಹಾರದ ರುಚಿ ಸವಿದರು. ನಾನು, ನಮ್ಮ ಹೊಟೇಲಿನ ಇಬ್ಬರು ಬಟ್ಲರ್ ಹಾಗೂ ರಾಜಭವನದ ಒಬ್ಬರು ಬಟ್ಲರ್ ಆಹಾರವನ್ನು ಬಡಿಸಿದೆವು. ಅವರಿಗೆ ಉಡುಪಿಯ ಯಾವುದೇ ಸಂಪ್ರದಾಯಿಕ ಆಹಾರವನ್ನು ತಯಾರಿಸಿಲ್ಲ. ರಾಜಭವನದಿಂದ ಬಂದ ಮೆನು ಪ್ರಕಾರವೇ ಆಹಾರ ತಯಾರಿಸಲಾಗಿದೆ. ತಯಾರಿಸಿದ ಆಹಾರವನ್ನು ರಾಜಭವನದ ತಜ್ಞರು ಪರೀಕ್ಷಿಸಿದ ಬಳಿಕವೇ ರಾಷ್ಟ್ರಪತಿಗೆ ನೀಡಲಾಯಿತು. ರಾಷ್ಟ್ರಪತಿ ಆಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ಓಶಿಯನ್ ಪರ್ಲ್‌ನ ಜನರಲ್ ಮೆನೇಜರ್ ಬಿಜು ವರ್ಗಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News