ಹೆತ್ತವರಿಗಾಗಿ ಯುವತಿಯರು ಪ್ರೀತಿ ತ್ಯಾಗ ಮಾಡುವುದು ಸಾಮಾನ್ಯ: ಸುಪ್ರೀಂ

Update: 2017-06-18 16:09 GMT

ಹೊಸದಿಲ್ಲಿ, ಜೂ. 18: ಭಾರತದಲ್ಲಿ ಯುವತಿಯರು ಹೆತ್ತವರ ನಿರ್ಧಾರಕ್ಕೆ ಗೌರವ ನೀಡಲು ಪ್ರೀತಿ ಹಾಗೂ ಸಂಬಂಧಗಳನ್ನು ತ್ಯಾಗ ಮಾಡುತ್ತಿರುವುದು ಸರ್ವೇಸಾಮಾನ್ಯ ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

ಯುವತಿಯೋರ್ವಳು ಗುಪ್ತವಾಗಿ ವಿವಾಹವಾಗಿ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಪ್ರಿಯಕರನಿಗೆ ಕೆಳ ನ್ಯಾಯಾಲಯ ನೀಡಿದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

1995ರಲ್ಲಿ ನಡೆದ ಈ ಘಟನೆಯಲ್ಲಿ 23 ವರ್ಷದ ಯುವತಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಪ್ರಿಯಕರ ಪ್ರಿಯತಮೆಯನ್ನು ಹತ್ಯೆಗೈದಿದ್ದಾನೆ ಎಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ರಾಜಸ್ಥಾನ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿತ್ತು.

ಮೊದಲು ಆಕೆ ಇಚ್ಛೆ ಇಲ್ಲದೇ ಇದ್ದರೂ ಹೆತ್ತವರ ಮಾತಿಗೆ ಗೌರವ ನೀಡಿದರು. ಆದರೆ, ಅನಂತರ ಆಕೆಯ ಮನಸ್ಸು ಪರಿವರ್ತನೆಯಾಗಿದೆ. ಘಟನ ಸ್ಥಳದಲ್ಲಿ ಕಂಡುಬಂದ ಹೂವಿನ ಹಾರ, ಬಳೆಗಳು ಹಾಗೂ ಕುಂಕುಮ ಇದಕ್ಕೆ ಸಾಕ್ಷಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 ಕುಟುಂಬದ ವಿರೋಧ ಇರುವುದರಿಂದ ವಿವಾಹವಾಗಲು ಸಾಧ್ಯವಿಲ್ಲ ಎಂದು ಯುವತಿ ತನ್ನ ಪ್ರಿಯಕರನಿಗೆ ಹೇಳಿರುವ ಸಾಧ್ಯತೆ ಇದೆ. ಹೆತ್ತವರ ಇಚ್ಛೆ ಮೀರಲು ಬಯಸದ ಈ ಯುವತಿ ತನ್ನ ಪ್ರೀತಿ ತ್ಯಾಗ ಮಾಡಿದ್ದಾಳೆ. ಇದು ಭಾರತದಲ್ಲಿ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಹೇಳಿದ್ದಾರೆ.

ಯುವಕ ಬೇರೆ ಜಾತಿಗೆ ಸೇರಿದ ಹಿನ್ನೆಲೆಯಲ್ಲಿ ತಾನು ವಿವಾಹಕ್ಕೆ ನಿರಾಕರಿಸಿದ್ದೆ ಎಂದು ಯುವತಿಯ ತಂದೆ ಸಾಕ್ಷ ನೀಡಿರುವುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News