ಝಿರೋ ಟ್ರಾಫಿಕ್: ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ
ಉಡುಪಿ, ಜೂ.18: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಡುಪಿ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ದೇವಳ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿ ಯಿಂದ ಝಿರೋ ಟ್ರಾಫಿಕ್ ಮೂಲಕ ಒಂದು ಗಂಟೆಗೂ ಅಧಿಕ ಸಮಯ ರಾಷ್ಟ್ರೀಯ ಹೆದ್ದಾರಿ 66, ಕೊಲ್ಲೂರು ರಸ್ತೆ ಹಾಗೂ ಉಡುಪಿ ನಗರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಯಿತು.
ರಾಷ್ಟ್ರಪತಿ ಆಗಮನಕ್ಕೆ ಕೆಲವೇ ನಿಮಿಷಗಳ ಮೊದಲು ಹೆಲಿಪ್ಯಾಡ್ ಎದುರಿನ ಎಪಿಎಂಸಿ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಅಲ್ಲದೆ ಆದಿಉಡುಪಿ- ಮಲ್ಪೆ ರಸ್ತೆ, ಕರಾವಳಿ ಬೈಪಾಸ್ ನಲ್ಲಿ ಎರಡು ಬದಿಯ ರಾಷ್ಟ್ರೀಯ ಹೆದ್ದಾರಿ, ನಗರದ ಕಲ್ಸಂಕ, ಗುಂಡಿಬೈಲು, ಬನ್ನಂಜೆ, ಎಸ್ಪಿ ಕಚೇರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಳಿಸಲಾಯಿತು.
ರಾಷ್ಟ್ರಪತಿಗಳು ಹೆಲಿಪ್ಯಾಡ್‌ನಿಂದ ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿಂದ ಮಠಕ್ಕೆ ಹೋಗುವವರೆಗೆ ಸುಮಾರು ಒಂದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಿ ಝಿರೋ ಟ್ರಾಫಿಕ್ ಮಾಡಲಾಯಿತು. ಇದರಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ಉಡುಪಿ ನಗರದ ರಸ್ತೆಗಳ ವಾಹನ ಸಂಚಾರದಲ್ಲಿ ವ್ಯತಯ ಉಂಟಾಗಿತ್ತು. ಆದರೆ ರವಿವಾರ ಆಗಿರುವುದರಿಂದ ಹೆಚ್ಚು ವಾಹನಗಳು ಇಲ್ಲದ ಕಾರಣ ಹೆಚ್ಚು ಟ್ರಾಫಿಕ್ ಸಮಸ್ಯೆಯಾಗಲಿಲ್ಲ. ಈ ವೇಳೆ ರಾಷ್ಟ್ರಪತಿಗಳು ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ರಾಷ್ಟ್ರಪತಿಯನ್ನು ನೋಡಲು ನೂರಾರು ಸಂಖ್ಯೆಯ ಜನ ಕಾತರದಿಂದ ಜಮಾಯಿಸಿದ್ದರು. ಇದಕ್ಕಾಗಿ ಆದಿಉಡುಪಿ, ರಾಷ್ಟ್ರೀಯ ಹೆದ್ದಾರಿ, ಉಡುಪಿ ನಗರ ಮತ್ತು ಕೃಷ್ಣ ಮಠದಲ್ಲಿ ಸುಮಾರು 1200 ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಷ್ಟ್ರಪತಿಗಳು ಉಡುಪಿಯಿಂದ ಕೊಲ್ಲೂರಿಗೆ ಹೋಗುವ ಸಮಯ ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಹಾಗೂ ವಂಡ್ಸೆ- ಕೊಲ್ಲೂರು ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ 2ಗಂಟೆಗೆ ಉಡುಪಿಯಿಂದ ಹೊರಟ ರಾಷ್ಟ್ರಪತಿ ಗಳ ವಾಹನ ಬ್ರಹ್ಮಾವರ ದಾಟಿ ಹೋಗುತ್ತಿದ್ದಂತೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಕೊಲ್ಲೂರು ರಸ್ತೆಯ ಸಂಚಾರವನ್ನು ತಡೆ ಹಿಡಿಯಲಾಯಿತು. ಅದೇ ರೀತಿ ರಾಷ್ಟ್ರಪತಿಗಳು ಕೊಲ್ಲೂರಿನಿಂದ ಸಂಜೆ 4:30ಕ್ಕೆ ಉಡುಪಿಗೆ ಹೊರಡುವಾಗ ಸುಮಾರು ಮುಕ್ಕಾಲು ಗಂಟೆಗಳ ಕಾಲ ಹೆದ್ದಾರಿ ಸಂಚಾರ ನಿಲ್ಲಿಸಲಾಯಿತು. ಇದಕ್ಕಾಗಿ ಕುಂದಾಪುರ ಹಾಗೂ ಕೊಲ್ಲೂರಿನಲ್ಲಿ ಸುಮಾರು 600 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕಾಗಿ ನೇಮಿಸಲಾಗಿತ್ತು. ಈ ರೀತಿಯ ಭದ್ರತೆಯು ಉಡುಪಿ ಜನತೆ ಹೊಸ ಅನುಭವವಾಗಿರುವುದರಿಂದ ಹೆಚ್ಚಿನವರು ತೊಂದರೆ ಅನುಭವಿಸುವಂತಾಯಿತು.
ರಾಷ್ಟ್ರಪತಿಯ ಎಲ್ಲ ಕಾರ್ಯಕ್ರಮಗಳು ನಿಗದಿ ಪಡಿಸಿದ ಸಮಯದಂತೆ ಸುಗಮವಾಗಿ ನಡೆದಿದೆ. ಸಮಯ ಪಾಲನೆ ಸರಿಯಾಗಿ ನಡೆದಿದೆ. ಎಲ್ಲ ಕಡೆ ಹೆಚ್ಚಿನ ಭದ್ರತೆಯನ್ನು ಒದಗಿಸಿ ಯಾವುದೇ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಈ ರೀತಿಯ ಭದ್ರತೆಯು ಉಡುಪಿ ಜನತೆಗೆ ಹೊಸ ರೀತಿಯ ಅನುಭವ. -ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಡುಪಿ