ಮಸೀದಿಯ ಕಾಣಿಕೆ ಡಬ್ಬಿ ಕಳವು
Update: 2017-06-18 22:00 IST
ಪುತ್ತೂರು,ಜೂ18 : ಪುತ್ತೂರು ನಗರದ ಹೊರವಲಯದಲ್ಲಿರುವ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿರುವ ಮಸೀದಿಯೊಂದರಿಂದ ಕಾಣಿಕೆ ಡಬ್ಬಿಯ ಹಣ ಮತ್ತು ಸಮೀಪದ ಅಂಗಡಿಯೊಂದರಿಂದ ಚಿಲ್ಲರೆ ಹಣ ಹಾಗೂ ಸಾಮಾಗ್ರಿಗಳು ಕಳವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಕೆಮ್ಮಾಯಿಯ ಜುಮ್ಮಾ ಮಸೀದಿಯ ಕಾಣಿಕೆ ಡಬ್ಬಿಯಲ್ಲಿದ್ದ ಚಿಲ್ಲರೆ ಹಣ ಹಾಗೂ ರೂ.2 ಸಾವಿರ ಮೌಲ್ಯದ ಮೊಬೈಲ್ ಒಂದನ್ನು ಕಳವು ಮಾಡಲಾಗಿದೆ. ಕೆಮ್ಮಾಯಿ ಕೃಷ್ಣನಗರ ಎಂಬಲ್ಲಿರುವ ಪತ್ರಿಕಾ ವಿತರಕ ಗೋಪಾಲ ಪೂಜಾರಿ ಅವರ ಅಂಗಡಿಯ ಮೇಲ್ಭಾವಣಿಯ ಶೀಟ್ ಜಾರಿಸಿ ಒಳನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ ಚಿಲ್ಲರೆ ಹಣ, ಬೀಡಿ ಮತ್ತು ಸಿಗರೇಟು ಪ್ಯಾಕ್‌ಗಳನ್ನು ಕಳವುಗೈದಿರುವುದಾಗಿ ತಿಳಿದು ಬಂದಿದೆ. ಈ ಎರಡು ಕಳವು ಪ್ರಕರಣಗಳ ಕುರಿತು ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.