ಮಧ್ಯಪ್ರದೇಶದಲ್ಲಿ ಶಾಲೆಗಳೇ ನೀರುಳ್ಳಿ ಗೋದಾಮು, ಶಿಕ್ಷಕರೇ ವ್ಯಾಪಾರಿಗಳು!
ರಾಜ್‌ಗಡ್, ಜೂ. 19: ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಸರಕಾರಿ ಅಧ್ಯಾಪಕ-ಅಧ್ಯಾಪಕಿಯರು ವಿದ್ಯಾರ್ಥಿಗಳಿಗೆ ಬೋಧಿಸುವುದರೊಂದಿಗೆ ನೀರುಳ್ಳಿ ಮಾರಲು ತೊಡಗಿದ್ದಾರೆ. ಇಲ್ಲಿ ಈ ವರ್ಷ ಪೂರೈಕೆ ಹೆಚ್ಚಾಗಿ ಹಠತ್ತಾಗಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ತರಕಾರಿ ಕೊಳೆಯುತ್ತಿರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗದೆ.
ಇದರಿಂದ ಶಾಲೆ ನೀರುಳ್ಳಿ ದಾಸ್ತಾನು ಗೋದಾಮ ಆಗಿ ಪರಿವರ್ತಿತವಾಗಿದೆ. ಶಾಲಾ ಶಿಕ್ಷಣ ಹಾಗೂ ಹಾಜರಾತಿ ಬಗ್ಗೆ ನಿಗಾ ಇಡಲು ಅಧ್ಯಾಪಕರು ನಿರ್ವಹಿಸುತ್ತಿರುವ ಜನ ಶಿಕ್ಷಣ ಕೇಂದ್ರಕ್ಕೆ ಕೃಷಿ ಮಾರುಕಟ್ಟೆಯಿಂದ ನೀರುಳ್ಳಿ ಪೂರೈಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ್ ಸಿಂಗ್ ಜಿಲ್ಲಾ ನಾಗರಿಕ ಪೂರೈಕೆ ಇಲಾಖೆಯನ್ನು ವಿನಂತಿಸಿದ್ದಾರೆ. ಇದರಿಂದ ಮಧ್ಯಾಹ್ನದ ಊಟ ಯೋಜನೆಯ ಪಾಲುದಾರರಾಗಿರುವ ಸರಕಾರೇತರ ಸಂಸ್ಥೆಗಳು ಸಬ್ಸಿಡಿ ಬೆಲೆಯಲ್ಲಿ ನೀರುಳ್ಳಿ ಪಡೆಯಲು ಸಾಧ್ಯವಾಗುತ್ತಿದೆ. ರೈತರು ತಾವು ಬೆಳೆಸಿದ ನೀರುಳ್ಳಿಯನ್ನು ಸುಲಭವಾಗಿ ಮಾರಾಟ ಮಾಡಲು ಈ ಪ್ರಕ್ರಿಯೆಯಿಂದ ಸಾಧ್ಯವಾಗುತ್ತಿದೆ.
ಸರಕಾರ ಪೂರೈಸುವ ನೀರುಳ್ಳಿಯನ್ನು ಸರಕಾರೇತರ ಸಂಸ್ಥೆಗಳಿಗೆ ವಿತರಿಸುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನೀರುಳ್ಳಿ ಕೊಳೆತು ನಷ್ಟ ಉಂಟಾಗುವುದು ತಪ್ಪಿದೆ ಎಂದು ಪ್ರವೀಣ್ ಸಿಂಗ್ ಹೇಳಿದ್ದಾರೆ. ಈ ನಿರ್ಧಾರದಿಂದ ನಮ್ಮ ಸಮಯ ವ್ಯರ್ಥವಾಗುತ್ತಿದೆ. ಶಾಲೆಗಳಲ್ಲಿ ನಿಗಾ ವಹಿಸುವುದು ಹಾಗೂ ಬೋಧಿಸುವುದರಲ್ಲಿ ಸ್ವಲ್ಪ ಸಮಯವನ್ನು ನೀರುಳ್ಳಿ ಮಾರಾಟಕ್ಕೆ ಮೀಸಲಿರಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅಧ್ಯಾಪಕರು- ಅಧ್ಯಾಪಕಿಯರು ಹೇಳಿದ್ದಾರೆ.