ಕುಟುಂಬದ ಅಭಿವೃದ್ಧಿಯಲ್ಲಿ ತಂದೆಯ ಪಾತ್ರಪ್ರಮುಖ: ಬಿಷಪ್

Update: 2017-06-19 12:46 GMT

ಉಡುಪಿ, ಜೂ.19: ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ತಂದೆಯ ಪಾತ್ರ ಪ್ರಮುಖವಾದುದು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಉಡುಪಿ ಧರ್ಮಪ್ರಾಂತ್ಯದ ಕೌಟಂಬಿಕ ಆಯೋಗದ ವತಿಯಿಂದ ಕಿನ್ನಿಮುಲ್ಕಿ ಕನ್ನರ್‌ಪಾಡಿಯಲ್ಲಿ ರವಿವಾರ ಆಯೋಜಿಸಲಾದ ವಿಶ್ವ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಂದು ಕುಟುಂಬದಲ್ಲಿ ತಂದೆಯ ಪ್ರೀತಿ ಅಮೂಲ್ಯವಾಗಿದ್ದು, ತಂದೆ ಯಾದವನು ವಿಶಿಷ್ಟವಾದ ಮತ್ತು ಮಹತ್ವದ ಪಾತ್ರವನ್ನು ವಹಿಸುತ್ತಾನೆ. ಮಕ್ಕಳ ಪಾಲನೆಯೊಂದಿಗೆ ಕುಟುಂಬದ ಏಳಿಗೆಗೆ ಹಗಲಿರುಳು ಶ್ರಮಿಸುವವನು ತಂದೆ. ಕುಟುಂಬದ ಸದಸ್ಯರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಅದಮ್ಯ ವಾದ ವ್ಯಕ್ತಿ ತಂದೆಯಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ಕುಟುಂಬದಲ್ಲಿ ತಂದೆಯ ಪಾತ್ರವನ್ನು ಕಡೆಗಣಿಸುವಂತಿಲ್ಲ ಎಂದರು.

ಕುಟುಂಬದಲ್ಲಿ ತಂದೆಯ ಪಾತ್ರ, ಸ್ಥಾನಮಾನ ಮತ್ತು ಜವಾಬ್ದಾರಿ ಕುರಿತು ನಿವೃತ್ತ ಪ್ರಾಂಶುಪಾಲ ಪ್ರೊ.ಆಲ್ಬನ್ ರೊಡ್ರಿಗಸ್, ಕುಟುಂಬದಲ್ಲಿ ತಂದೆಯು ನಿರ್ವಹಿಸಬೇಕಾದ ಪಾತ್ರದ ಕುರಿತು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಮಾತನಾಡಿದರು. ಉಡುಪಿ ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಆಲ್ಫೋನ್ಸ್ ಡಿಕೋಸ್ತ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾರ್ಜ್ ಕ್ಯಾಸ್ತಲಿನೋ ನಕ್ರೆ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕ ವಂ.ಹೆರಾಲ್ಡ್ ಪಿರೇರಾ, ಕೌಟಂಬಿಕ ಆಯೋಗದ ಅಧ್ಯಾತ್ಮಿಕ ನಿರ್ದೇಶಕ ವಂ.ಚೇತನ್ ಲೋಬೊ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ 50 ಚರ್ಚುಗಳಿಂದ 550 ತಂದೆಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧರ್ಮಪ್ರಾಂತ್ಯದ ಕೌಟಂಬಿಕ ಆಯೋಗದ ನಿರ್ದೇಶಕ ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News