ಆರೆಸ್ಸೆಸ್ ಹಿನ್ನೆಲೆಯ ಕೋವಿಂದ್‌ಗೆ ವಿರೋಧ: ಸಿಪಿಐ
ಹೈದರಾಬಾದ್, ಜೂ.19: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಆರೆಸ್ಸೆಸ್ ಹಿನ್ನೆಲೆಯುಳ್ಳವರಾದ ಕಾರಣ ವಿಪಕ್ಷಗಳು ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಸಿಪಿಐ ಹೇಳಿದೆ.
ಸಂಘ ಪರಿವಾರದ ಸಂಸ್ಥೆಯಾಗಿರುವ ಬಿಜೆಪಿ ದಲಿತ್ ಮೋರ್ಛಾದ ಅಧ್ಯಕ್ಷರಾಗಿದ್ದಾರೆ.ಆರೆಸ್ಸಸ್‌ನ ಯಾವುದೇ ವ್ಯಕ್ತಿಯನ್ನು ನಾವು ವಿರೋಧಿಸುತ್ತೇವೆ. ಆದ್ದರಿಂದ ಖಂಡಿತ ನಾವು ಕೋವಿಂದ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುವರ್ಣಂ ಸುಧಾಕರ ರೆಡ್ಡಿ ಸುದ್ದಿಸಂಸ್ಥೆಗೆ ತಿಳಿಸಿದರು.
ಕೇಂದ್ರದಲ್ಲಿ ಮೂರು ವರ್ಷದ ಬಿಜೆಪಿ ಸರಕಾರ ದೇಶವನ್ನು ವಿಭಜಿಸಿದೆ. ಆರೆಸ್ಸೆಸ್ ಹಿನ್ನೆಲೆ ಇರುವ ವ್ಯಕ್ತಿಗಳು ದೇಶವನ್ನು ಮತ್ತೂ ವಿಭಜಿಸುತ್ತಾರೆ. ರಾಷ್ಟ್ರಪತಿ ಅಭ್ಯರ್ಥಿಗೆ ಪ್ರಜಾಪ್ರಭುತ್ವದ ಹಿನ್ನೆಲೆ ಇರಬೇಕು. ತೀವ್ರವಾದಿ ಆರೆಸ್ಸೆಸ್ ಹಿನ್ನೆಲೆ ಖಂಡಿತಾ ಸೂಕ್ತವಲ್ಲ ಎಂದವರು ಹೇಳಿದರು.
ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ ಎಂದ ಅವರು, ಜೂನ್ 20 ಅಥವಾ 21ರಂದು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದರು.