ಶಾಲೆಗೆ ಬೀಗ ಜಡಿದು ಪ್ರತಿಭಟನೆ: ಎಸ್‌ಡಿಎಂಸಿ ಎಚ್ಚರಿಕೆ
ಪುತ್ತೂರು,ಜೂ.19; ಬಜತ್ತೂರು ಶಾಲಾ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯ ಅಧಿಕಾರಿಯವರು ಬೇರೆ ಶಾಲೆಗೆ ನಿಯೋಜಿಸಿದ್ದು, ಇದರಿಂದಾಗಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ನಿಯೋಜನೆಯನ್ನು ರದ್ದುಗೊಳಿಸಿ ಶಾಲೆಯಲ್ಲಿಯೇ ಉಳಿಸಿಕೊಡಬೇಕು ಎಂದು ಪುತ್ತೂರು ತಾಲೂಕಿನ ಬಜತ್ತೂರು ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಶಿಕ್ಷಕರನ್ನು ಮತ್ತೆ ಬಜತ್ತೂರು ಶಾಲೆಯಲ್ಲೇ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಜತ್ತೂರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಂದ್ರ ಕುಮಾರ್ ಪಡ್ಪು ಅವರು ಜಜತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 140 ಮಕ್ಕಳಿದ್ದು, 6 ಮಂದಿ ಶಿಕ್ಷಕರಿದ್ದಾರೆ. ಇದೀಗ ಶಿಕ್ಷಣಾಧಿಕಾರಿಯವರು ಇಲ್ಲಿನ ಶಿಕ್ಷಕ ಮೋಹನ್ ಚಂದ್ರ ಎಂಬವರನ್ನು ಶಾಂತಿನಗರ ಶಾಲೆಗೆ ನಿಯೋಜನೆ ಮಾಡಲು ಆದೇಶಿಸಿದ್ದಾರೆ. ಇದರಿಂದ ಬಜತ್ತೂರು ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗುತ್ತದೆ. ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಕ್ಷಣವೇ ನಿಯೋಜನೆಯ ಆದೇಶವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಶಿಕ್ಷಣಾಧಿಕಾರಿಯವರು ಆಸ್ಪದ ನೀಡುವುದಿಲ್ಲ ಎನ್ನುವ ಭರವಸೆಯಿಂದ ಇದೀಗ ಮತ್ತೊಮ್ಮೆ ಮನವಿ ಮಾಡಲಾಗಿದೆ ಎಂದು ಮನವಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಆಗಮಿಸಿದ ಎಸ್‌ಡಿಎಂಸಿ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಹಮೀದ್ ವಳಾಲು, ಅಣ್ಣಿ ಪೂಜಾರಿ ಮಣಿಕ್ಕಳ, ಯೊಗೀಶ್ ಗುಡ್ಡೆತ್ತಡ್ಕ, ಪೂವಪ್ಪ ಗೌಡ ಆರಾಲು, ಉಮೇಶ್ ಎಂಜಿರಡ್ಕ ,ಅಬ್ದುಲ್ ರಹಿಮಾನ್,ವಸಂತ ಗೌಡ ಪಿಜಕ್ಕಳ, ಜಾನಕಿ,ರಾಧಾ, ಆತ್ಮ, ಚಿನ್ನಮ್ಮ, ದೇವಕಿ, ರವಿಕಲಾ, ಲೀಲಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. -