ಕಾರ್ಮಿಕರ ಹಿತಾಸಕ್ತಿಯನ್ನು ಬಲಿ ಕೊಡುತ್ತಿರುವ ಕೇಂದ್ರ ಸರಕಾರ
ಮಂಗಳೂರು, ಜೂ.19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕಾರ್ಮಿಕರ ಕಾನೂನುಗಳನ್ನು ಮೊಟಕುಗೊಳಿಸಿ, ಕಾರ್ಮಿಕರ ಹಕ್ಕುಗಳನ್ನು ಕಸಿಯಲು ಹೊರಟಿದೆ. ಅಲ್ಲದೆ ದೇಶದ ಸ್ವಾತಂತ್ರ್ಯ, ಸಾರ್ವಭೌಮತೆಯನ್ನು ಅಮೇರಿಕನ್ ಸಾಮ್ರಾಜ್ಯಶಾಗಳಿಗೆ ಬಲಿ ಕೊಡಲು ಕಾತರರಾಗಿದ್ದಾರೆ. ಕಾರ್ಮಿಕರ ಹಿತಾಸಕ್ತಿಗಳನ್ನು ಪಾಲಿಸಬೇಕಾದ ಕೇಂದ್ರ ಸರಕಾರವು ಬಂಡವಾಳಶಾಹಿಗಳ ಪರವಾಗಿ ತುತ್ತೂರಿ ಭಾರಿಸುತ್ತಿದೆ ಎಂದು ಹಿರಿಯ ರೈತ, ಕಾರ್ಮಿಕರ ಮುಂದಾಳು ಕೆ.ಆರ್. ಶ್ರೀಯಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ನೇತೃತ್ವದಲ್ಲಿ ನಗರದ ಬೋಳಾರದಲ್ಲಿ ಎರಡು ದಿನಗಳ ಕಾಲ ಜರಗಿದ ದ.ಕ. ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ‘ಪ್ರಸ್ತುತ ಸಂದರ್ಭ ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ‘ಸೆ.14ರ ಹೋರಾಟದ ಬೇಡಿಕೆ’ಗಳ ಕುರಿತು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀೀನಾಕ್ಷಿ ಸುಂದರಂ, ‘ಸಂಘಟನೆ-ವಿಸ್ತರಣೆ’ ವಿಷಯದ ಬಗ್ಗೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ‘ಮುಂದಿನ ಕಾರ್ಯಯೋಜನೆ’ಗಳ ಬಗ್ಗೆ ಸಿಐಟಿಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು...