ಸರಣಿ ಅಪಘಾತ: ನಾಲ್ಕು ವಾಹನ ಜಖಂ
Update: 2017-06-19 21:05 IST
ಉಡುಪಿ, ಜೂ.19: ಕಡಿಯಾಳಿ ಸೋನಿ ಶೋರೂಂ ಎದುರು ಇಂದು ಸಂಜೆ ವೇಳೆ ಮಾರುತಿ ಇಕೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ನಿಲ್ಲಿಸಿದ ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದಾರೆ.
ಮಣಿಪಾಲದಿಂದ ಬಜ್ಪೆ ಕಡೆಗೆ ಹೋಗಲು ಕೇರಳ ರಾಜ್ಯದ ಕುಮಾರ ಸ್ವಾಮಿ ಎಂಬವರು ಚಲಾಯಿಸಿಕೊಂಡು ಬಂದ ಮಾರುತಿ ಇಕೋ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಲಾದ ಮಾರುತಿ ಸೆಲೆರಿಯೊ ಕಾರಿಗೆ ಹಿಂದಿ ನಿಂದ ಢಿಕ್ಕಿ ಹೊಡೆಯಿತು. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ.
ಬಳಿಕ ಅಲ್ಲೇ ನಿಲ್ಲಿಸಲಾದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಸ್ಕೂಟಿಗೆ ಢಿಕ್ಕಿ ಹೊಡೆಯಿತು. ಇದರಿಂದ ಈ ಎರಡು ವಾಹನಗಳಿಗೆ ಹಾನಿ ಉಂಟಾಗಿದೆ. ಇಕೋ ಕಾರಿನಲ್ಲಿದ್ದ ರತ್ನಮ್ಮ ಹಾಗೂ ಪ್ರಸನ್ನ ಕುಮಾರ್ ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.