ಭೂ ಪರಿವರ್ತನೆ ‘ಖಾತಾ’ ನಿಯಮದಿಂದ ಸಾರ್ವಜನಿಕರಿಗೆ ಸಂಕಷ್ಟ

Update: 2017-06-19 16:05 GMT

ಪುತ್ತೂರು,ಜೂ.19; ಹೊಸ ಮನೆ ನಿರ್ಮಾಣ ಇನ್ನಿತರ ಕೆಲಸಗಳಿಗೆ ಮುಂದಾಗುವ ಸಾರ್ವಜನಿಕರಿಗೆ ಸರ್ಕಾರದ ಭೂ ಪರಿವರ್ತನೆ ಖಾತಾ ನಿಯಮದಿಂದಾಗಿ ಸಂಕಷ್ಟವಾಗುತ್ತಿದ್ದು, ಇದನ್ನೇ ನೆಪವಾಗಿಟ್ಟು ಪುತ್ತೂರಿನ ನಗರಸಭೆ, ನಗರಯೋಜನಾ ಪ್ರಾಧಿಕಾರ,ಕಂದಾಯ ಇಲಾಖೆ ಹಾಗೂ ಭೂಮಾಪನಾ ಇಲಾಖೆಗಳ ಅಧಿಕಾರಿಗಳು ತೀವ್ರ ತೊಂದರೆ ನೀಡುತ್ತಿದ್ದಾರೆ. ಭೂ ಪರಿವರ್ತನೆ ಮಾಡಲು ಜನತೆಯಲ್ಲಿ ಪಹಣಿ ಪತ್ರವಿದ್ದು, ಖಾತೆ ಅನಗತ್ಯವಾಗಿದ್ದರೂ ಸರ್ಕಾರ ನೀಡಿರುವ ಸುತ್ತೋಲೆಯನ್ನು ಇಟ್ಟುಕೊಂಡು ಜನತೆಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಳನಾಥ ಪ್ರಭು ಮತ್ತು ಪುತ್ತೂರು ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ ಆರೋಪಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭೂ ಪರಿವರ್ತನೆಗೆ ಜಿಲ್ಲೆಯಲ್ಲಿ ಖಾತೆಯ ಅಗತ್ಯವಿಲ್ಲ ಎಂದು ಹಿಂದಿನ ಜಿಲ್ಲಾಧಿಕಾರಿ ಪೊನ್ನಪ್ಪ ಅವರು ಆದೇಶ ನೀಡಿದ್ದರು. ಇದಕ್ಕೆ ಕೇವಲ ಜಾಗದ ಪಹಣಿ ಪತ್ರ ಇದ್ದರೆ ಸಾಕಾಗುತ್ತದೆ. ಆದರೆ ಈಗಿನ ಅಧಿಕಾರಿ ವರ್ಗ ಸರ್ಕಾರದ ಸುತ್ತೋಲೆಯನ್ನು ಮಾನದಂಡವಾಗಿಟ್ಟುಕೊಂಡು ಖಾತೆ ಅಗತ್ಯ ಎಂದು ವಾದಿಸುತ್ತಿದ್ದಾರೆ ಎಂದ ಅವರು ಈ ಹಿಂದಿನ ನಿಯಮದಂತೆ ಭೂ ಪರಿವರ್ತನೆಗೆ ಖಾತೆ ಸರಳೀಕರಣ ವ್ಯವಸ್ಥೆಯನ್ನು ಕಲ್ಪಿಸಬೇಕು. ಖಾತೆ ನಿಯಮವನ್ನು ಸಡಿಲಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ನಗರಸಭಾ ವ್ಯಾಪ್ತಿಯಲ್ಲಿ 10ಸೆಂಟ್ಸ್ ಸ್ಥಳವನ್ನು ಭೂ ಪರಿವರ್ತನೆ ಮಾಡಬೇಕಾದರೆ ಇದರ ಶೇ 45 ರಷ್ಟು ಸ್ಥಳವನ್ನು ಸರ್ಕಾರಕ್ಕೆ ನೀಡಬೇಕಾಗಿದೆ. ಹಾಗಿದ್ದರೆ ಅದರಲ್ಲಿ ಉಳಿಯುವುದಾದರೂ ಏನು ಎಂದು ಪ್ರಶ್ನಿಸಿದ ಅವರು ಈ ಅಧಿಕಾರಿಗಳಿಗೆ ಜಿಲ್ಲೆಯ ಕಂದಾಯ ವ್ಯವಸ್ಥೆ ಬಗ್ಗೆ ಸ್ವಲ್ಪವೂ ಜ್ಙಾನವಿಲ್ಲ. ಹಾಗಾಗಿ ಬೇಕಾಬಿಟ್ಟಿ ಚಿಂತನೆಗಳನ್ನು ನಡೆಸಿ ಜನತೆಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದರು. ರಾಜ್ಯಕ್ಕೆ ಈ ಸುತ್ತೋಲೆಯ ನಿಯಮ ಅನ್ವಯವಾಗುತ್ತಿದ್ದರೂ ಪುತ್ತೂರು ಬಿಟ್ಟು ಬೇರೆ ಕಡೆಗಳಲ್ಲಿ ಇದನ್ನು ಅನುಷ್ಠಾನ ಮಾಡಿಲ್ಲ. ಉದ್ದೇಶ ಪೂರ್ವಕ ಹಾಗೂ ರಾಜಕೀಯ ವಾಂಛೆಯಿಂದ ಇದನ್ನು ಇಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಅನಗತ್ಯವಾಗಿ ಸುತ್ತೋಲೆಯಲ್ಲಿ ವಿವರಿಸಿದ ವಿಚಾರವನ್ನು ಜನತೆಯ ಮೇಲೆ ಹೇರುವ ಮೂಲಕ ಜನತೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಖಾತೆ, ಏಕನಿವೇಶನ,ಕಟ್ಟಡ ಪರವಾನಿಗೆ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತ ಮಾಡುವ ಹುನ್ನಾರ ನಡೆಯುತ್ತಿದೆ. ಸುತ್ತೋಲೆಯಂತೆ ನಡೆಯಬೇಕು ಎಂಬ ಒತ್ತಡವನ್ನು ಮೆಲಾಧಿಕಾರಿಗಳ ಮೇಲೆ ತರುವ ಕೆಲಸವನ್ನು ಕೆಲವು ಅಧಿಕಾರಿಗಳೇ ನಡೆಸುತ್ತಿದ್ದಾರೆ. ಇದರಿಂದಾಗಿ ಜನತೆ ಕಷ್ಟಕ್ಕೆ ಸಿಲುಕುವಂತಾಗಿದೆ ಎಂದ ಅವರು ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ನಾಗರಿಕ ಕ್ರೀಯಾ ಸಮಿತಿ, ಇಂಜಿನಿಯರಿಂಗ್ ಎಸೋಶಿಯೇಶನ್ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಉಗ್ರ ಹೋರಾಟ ನಡೆಸಬೇಕಾಗಿ ಬರುತ್ತದೆ ಎಂದು ಎಚ್ಚರಿಸಿದರು.

ಪುತ್ತೂರಿನ ಮಿನಿವಿಧಾನ ಸೌಧದಲ್ಲಿ ಕಂದಾಯ ಇಲಾಖೆ,ಟ್ರೆಜರಿ, ಭೂ ಮಾಪನಾ ಇಲಾಖೆ,ಆಹಾರ ಇಲಾಖೆ, ಸಹಾಯಕ ಉಪವಿಭಾಗಾಧಿಕಾರಿಗಳ ಕಚೇರಿ ಇದ್ದು, ಕಂದಾಯ ಇಲಾಖೆಗೆ ನೆರ ಸಂಬಂಧ ಹೊಂದಿರುವ ಅಭಿಲೇಖಾಲಯ ಮಾತ್ರ ಇನ್ನು ಕಾಲಿಟ್ಟಿಲ್ಲ. ಈ ಅಭಿಲೇಖಾಲಯ ಈಗಲೂ ಹಳೆಯ ತಾಲ್ಲೂಕು ಕಚೇರಿಯಲ್ಲೇ ಇದೆ. ಇದರಿಂದಾಗಿ ಜನತೆ ತಮ್ಮ ಜಮೀನಿನ ದಾಖಲೆ ಪತ್ರಗಳ ಪ್ರತಿಗಳಿಗಾಗಿ ಹಳೆ ಕಚೇರಿ ಹಾಗೂ ಮಿನಿ ವಿಧಾನಸಭೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಅಧಿಕಾರಿಗಳಿಗೆ ಈ ಅಭಿಲೇಖಾಲಯವನ್ನು ಸ್ಥಳಾಂತರ ಮಾಡಲು ಹಣದ ಸಮಸ್ಯೆಯಾದರೆ ನಾವು ಸಂಘ ಸಂಸ್ಥೆಗಳಲ್ಲಿ ಹಾಗೂ ಜನತೆಯಲ್ಲಿ ’ಭಿಕ್ಷಾಟನೆ’ ಮಾಡಿ ಹಣ ಒಟ್ಟುಗೂಡಿಸುವ ಕೆಲಸ ಮಾಡಿಕೊಡುತ್ತೇವೆ. ಇನ್ನಾದರೂ ಈ ಅಭಿಲೇಖಾಲಯವನ್ನು ಮಿನಿ ವಿಧಾನಸಭೆಗೆ ಸ್ಥಳಾಂತರ ಮಾಡಬೇಕು ಎಂದು ರವಳನಾಥ ಪ್ರಭು ಅವರು ಆಗ್ರಹಿಸಿದರು.

ಭೂಮಾಪನಾ ಇಲಾಖೆಯ ಡಿಡಿಎಲ್‌ಆರ್ ಪುತ್ತೂರಿಗೆ ಕಾಲಿಡದೆ ಮೂರೂವರೆ ತಿಂಗಳಾಯಿತು. ಪುತ್ತೂರು ವಿಭಾಗದ ಭೂ ಮಾಪನಾ ಇಲಾಖೆಯ ಎಡಿಎಲ್‌ಆರ್ ಭೈರಪ್ಪ ಅವರು ಜನತೆಯ ಪಾಲಿಗೆ ತೀವ್ರ ಸಮಸ್ಯೆ ನೀಡುವ ಅಧಿಕಾರಿಯಾಗಿದ್ದಾರೆ. ವಾರದಲ್ಲಿ ಒಂದೆರಡು ಸಲ ಮಾತ್ರ ಕಚೇರಿಗೆ ಕಾಲು ಇಡುವ ಸಂಪ್ರದಾಯ ಬೆಳೆಸಿಕೊಂಡಿರುವ ಇವರು ರೈತಾಪಿ ವರ್ಗದ ಜನರಿಗೆ ಅಗತ್ಯವಾಗಿ ಬೇಕಾದ ಪಹಣಿ ಪತ್ರ ಬದಲಾವಣೆ ಹಾಗೂ ಪಹಣಿ ಪತ್ರ ಸರಪಡಿಸುವಿಕೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ರೈತಾಪಿ ವರ್ಗದವರ ಜಮೀನು ಹಿಂದೆ ಪ್ಲಾಟಿಂಗ್ ಆದ ಬಗ್ಗೆ ಎಫ್.ಎಂಬಿ,ಆಕಾರಬಂಧು ಹಾಗೂ ನಮೂನೆ 10 ನ್ನು ಇಟ್ಟು ಪಹಣಿಪತ್ರ ಸರಿಪಡಿಸಲು ನೀಡುವ ಅರ್ಜಿಗೆ ಎಡಿಎಲ್‌ಆರ್ ಸಹಿ ಅಗತ್ಯವಿದ್ದು, ಇದಕ್ಕಾಗಿ ಅಧಿಕಾರಿಯ ಬಳಿಗೆ ಹೋದರೆ ಹಿಂದಿನವರು ಮಾಡಿದ ತಪ್ಪನ್ನು ನಾನೇಕೆ ಹೊರಬೇಕು. ನಾನು ಮಾಡುವುದಿಲ್ಲ ಎಂದು ಉಢಾಪೆಯ ಉತ್ತರ ಕೊಡುತ್ತಿದ್ದಾರೆ. ಇಂತಹ ನಿಷ್ಪ್ರಯೋಜಕ ಅಧಿಕಾರಿಯ ಅಗತ್ಯ ಪುತ್ತೂರಿಗೆ ಅನಗತ್ಯವಾಗಿದ್ದು, ತಕ್ಷಣ ಇವರನ್ನು ಪುತ್ತೂರಿನಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದರು. ಜನತೆಯ ಸೌಲಭ್ಯಕ್ಕಾಗಿರುವ ಸ್ಥಳೀಯ ಆಡಳಿತ ಸಂಸ್ಥೆಯಾದ ಪುತ್ತೂರು ನಗರಸಭೆ ಪ್ರಸ್ತುತ ಸತ್ತಮನೆಯಂತಾಗಿದೆ. ಇಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಖಾತೆ ಬದಲಾವಣೆಗೆ ನೀಡಿದ ಸಾವಿರಾರು ಕಡತಗಳು ಧೂಳು ತಿನ್ನುತ್ತಿವೆ. ಹಿಂದೆ 5 ವರ್ಷಕ್ಕೊಮ್ಮೆ ಅನಧಿಕೃತ ಕಟ್ಟಡಗಳ ಬಗ್ಗೆ ಸಮರ್ಪಕವಾದ ಸರ್ವೆ ಕಾರ್ಯ ನಡೆಸಲಾಗುತ್ತಿತ್ತು. ಕಳೆದ 10 ವರ್ಷಗಳಿಂದ ಇಲ್ಲಿ ’ಎಸಸ್‌ಮೆಂಟ್’ ನಡೆದೇ ಇಲ್ಲ. ನೂರಾರು ಅನಧಿಕೃತ ಕಟ್ಟಡಗಳು , ಅನಧಿಕೃತ ನೀರಿನ ಸಂಪರ್ಕಗಳಿದ್ದರೂ ಈ ಬಗ್ಗೆ ನಗರಸಭೆಗೆ ಗೊಡವೆಯೇ ಇಲ್ಲವಾಗಿದೆ. ನಗರಸಭೆ ಇದ್ದೂ ನಿಷ್ಪ್ರಯೋಜಕವಾಗಿದೆ. ಇಲ್ಲಿ ಹೋದರೆ ಮಾತನಾಡುವವರೇ ಇಲ್ಲ. ಸತ್ತ ಮನೆಗೆ ಹೋದ ಅನುಭವವಾಗುತ್ತದೆ ಎಂದು ಇಸಾಕ್ ಸಾಲ್ಮರ ಅವರು ಆರೋಪಿಸಿದರು.

 ಸುದ್ದಿಗೋಷ್ಠಿಯಲ್ಲಿ ಪುತ್ತೂರು ಎಂಜಿನಿಯರ್ಸ್‌ ಎಸೋಸಿಯೇಶನ್‌ನ ಅಧ್ಯಕ್ಷ ವೆಂಕಟರಾಜ್, ಎಂಜಿನಿಯರ್‌ಗಳಾದ ಶಂಕರ್ ಭಟ್,ವಸಂತ್ ಭಟ್, ಸತ್ಯನಾರಾಯಣ , ಸಾಮಾಜಿಕ ಕಾರ್ಯಕರ್ತರಾದ ವಕೀಲ ಭಾಸ್ಕರ ಪೆರ್ವಾಜೆ, ಇಬ್ರಾಹಿಂ ಕೂರ್ನಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News