ತಾಯಿಯನ್ನು ಪೆಟ್ರೋಲ್ ಹಾಕಿ ಸುಡಲು ಯತ್ನಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್

Update: 2017-06-19 16:39 GMT

ಬೆಳ್ತಂಗಡಿ, ಜೂ.19: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮಗ ತಾಯಿಯ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಹಾಕಿ ಸುಡಲು ಯತ್ನಿಸಿದ್ದಾನೆ ಎಂದು ದೂರು ನೀಡಿದ್ದ ರಾದಮ್ಮ ಅವರು ತನ್ನ ಸೊಸೆ ಹಾಗು ಇಬ್ಬರು ಪುಟಾಣಿ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ವೀಡಿಯೊ ಇದೀಗ ಬಹಿರಂಗ ಗೊಂಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ರವಿವಾರ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ಜಾಗಕ್ಕೆ ಅಗಳು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು ಮುಂದಾಗುವ ವೇಳೆ ಅದಕ್ಕೆ ತಡೆ ಒಡ್ಡಲಾಗಿತ್ತು. ತನ್ನ ಸ್ವಂತ ಮಗನ ವಶದಲ್ಲಿರುವ ಜಾಗಕ್ಕೇ ಬೇಲಿ ಹಾಕಲು ತಂದೆ ತಾಯಿ ಮುಂದಾಗಿದ್ದರು ಎನ್ನಲಾಗಿದೆ.

ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ ಹಾಗೂ ಇಬ್ಬರು ಎಳೆಯ ಮಕ್ಕಳು ನೀಂತಿದ್ದಾರೆ. ಸುಮಾರು ಒಂದು ವರ್ಷ ಪ್ರಾಯದ ಮಗುವನ್ನು ಎತ್ತಿಕೊಂಡು ಇನ್ನೊಂದು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದ ಮಹಿಳೆಯ ಬಳಿಗೆ ಹೋದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆದಿದ್ದಾರೆ. ಅಳುತ್ತಿದ್ದು ಮಗುವನ್ನು ಪಕ್ಕಕ್ಕೆ ದೂಡಿದ ಇವರು ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಾರೆ. ಜೋರಾಗಿ ಅಳುತ್ತಿದ್ದ ಮಗುವಿನೊಂದಿಗೆ ಆಕೆಯನ್ನು ದೂಡಿ ಹಾಕಿ ಜೆಸಿಬಿ ಹೋಗಲು ಅನುವುಮಾಡಿ ಕೊಡುತ್ತಿರುವ ವೀಡಿಯೋ ದೃಶ್ಯಗಳು ಬಹಿರಂಗ ಗೊಂಡಿದೆ.

ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿರುವ ತಾಯಿ ತನ್ನ ಮಗ ಹಾಗೂ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ತನ್ನ ಮೇಲೆ ಪಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದರು. ಪೋಲೀಸರೂ ಆರಂಭದಲ್ಲಿ ಈಕೆಯ ದೂರನ್ನು ದಾಖಲಿಸಿದ್ದರೂ, ಇದೀಗ ಆಕೆಯೇ ಹಲ್ಲೆ ನಡೆಸಿರುವ ವೀಡಿಯೋಗಳು ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News