×
Ad

ತತ್ಕಾಲ್ ಟಿಕೇಟ್ ಮುಂಗಡ ಕಾಯ್ದಿರಿಸುವಿಕೆ ನಿಯಮ ಬದಲಾಯಿಸಿದ ಐಆರ್‌ಸಿಟಿಸಿ

Update: 2017-06-19 22:11 IST

ಹೊಸದಿಲ್ಲಿ, ಜೂ. 18: ಅಲ್ಪಾವಧಿ ಸೂಚನೆ ನೀಡಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತತ್ಕಾಲ್ ಮುಂಗಡ ಕಾಯ್ದಿರಿಸುವಿಕೆಯನ್ನು 1997ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಕಾಲಕಾಲಕ್ಕೆ ಅನುಗುಣವಾಗಿ ತತ್ಕಾಲ್ ಯೋಜನೆಯಲ್ಲಿ ಕೆಲವು ಬದಲಾವಣೆ ತರಲಾಗಿತ್ತು. ಈಗ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ದಿನ ಹೊರತುಪಡಿಸಿ ಒಂದು ದಿನ ಮುಂಚಿತವಾಗಿ ತತ್ಕಾಲ್ ಟಿಕೆಟ್ ಮುಂಗಡ ಕಾಯ್ದಿರಿಸಬಹುದು ಎಂದು ಐಆರ್‌ಸಿಟಿಸಿ ವೆಬ್‌ಸೈಟ್ ಹೇಳಿದೆ.

 ಎಸಿ ಕ್ಲಾಸ್‌ಗೆ ಬೆಳಗ್ಗೆ 10 ಗಂಟೆಯಿಂದ, ಎಸಿಯೇತರ ಕ್ಲಾಸ್‌ಗೆ ಬೆಳಗ್ಗೆ 11 ಗಂಟೆಯಿಂದ ತತ್ಕಾಲ್ ಟಿಕೆಟ್ ಕಾಯ್ದಿರಿಸಬಹುದು. ಉದಾಹರಣೆಗೆ ರೈಲು ಜೂನ್ 30ರಂದು ನಿಲ್ದಾಣದಿಂದ ಸಂಚಾರ ಆರಂಭಿಸುವುದಾದರೆ ಎಸಿ ಕ್ಲಾಸ್‌ಗೆ ಜೂನ್ 29ರಂದು ಬೆಳಗ್ಗೆ 10 ಗಂಟೆಯಿಂದ, ಎಸಿಯೇತರ ಕ್ಲಾಸ್‌ಗೆ ಬೆಳಗ್ಗೆ 11 ಗಂಟೆಯಿಂದ ತತ್ಕಾಲ್ ಟಿಕೆಟ್ ಮುಂಗಡ ಕಾಯ್ದಿರಿಸಬಹುದು.

ತತ್ಕಾಲ್ ಇ-ಟೆಕೇಟ್ ಮುಂಗಡ ಕಾಯ್ದಿರಿಸುವಾಗ ಪ್ರತೀ ಪ್ರಯಾಣಿಕ (ಕನಿಷ್ಠ ಓರ್ವ ಪ್ರಯಾಣಿಕನಿಗೆ ಕಡ್ಡಾಯ) ಪ್ರಯಾಣದ ಸಂದರ್ಭ ಬಳಸಲು ಸಾಧ್ಯವಾಗುವ ಆಕೆ/ಆತನ ಗುರುತು ಚೀಟಿ ಮಾದರಿ ಹಾಗೂ ಮುಂಗಡ ಕಾಯ್ದಿರಿಸುವ ಫಾರ್ಮ್‌ನಲ್ಲಿ ಆಕೆ/ಆತನ ಗುರುತು ಚೀಟಿಯ ಸಂಖ್ಯೆ ದಾಖಲಿಸಬೇಕು ಎಂದು ಐಆರ್‌ಸಿಟಿಸಿ ವೆಬ್‌ಸೈಟ್ ಹೇಳಿದೆ.

ಪ್ರಯಾಣದ ಸಂದರ್ಭ ಟಿಕೆಟ್‌ನಲ್ಲಿ ಗುರುತು ಚೀಟಿಯ ಸಂಖ್ಯೆ ನಮೂದಿಸಿದ ಕನಿಷ್ಠ ಓರ್ವ ಪ್ರಯಾಣಿಕ ಟಿಕೆಟ್‌ನಲ್ಲಿ ನಮೂದಿಸಿದ ಗುರುತು ಚೀಟಿಯ ಮೂಲ ಪ್ರತಿ ಸಲ್ಲಿಸಬೇಕು. ವಿಫಲವಾದಲ್ಲಿ ಎಲ್ಲ ಪ್ರಯಾಣಿಕರನ್ನು ಟಿಕೇಟು ರಹಿತ ಪ್ರಯಾಣಿಕರು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ತತ್ಕಾಲ್ ಇ-ಟೆಕೇಟ್‌ನಲ್ಲಿ ಗರಿಷ್ಠ ನಾಲ್ವರು ಪ್ರಯಾಣಿಕರಿಗೆ ಮುಂಗಡ ಕಾಯ್ದಿರಿಸಬಹುದು. ಪ್ರತಿ ಪ್ರಯಾಣಿಕರಿಗೆ ಸಾಮಾನ್ಯ ಟಿಕೆಟ್‌ಗಿಂತ ಹೆಚ್ಚುವರಿಯಾಗಿ ತತ್ಕಾಲ್ ಶುಲ್ಕ ಅನ್ವಯಿಸಲಾಗುತ್ತದೆ. ಕೆಲವು ಸಂದರ್ಭ ಹೊರತುಪಡಿಸಿ ದೃಢೀೀಕರಿಸಿದ ತತ್ಕಾಲ್ ಟಿಕೆಟ್ ರದ್ದುಗೊಳಿಸಿದರೆ ಶುಲ್ಕ ಹಿಂದಿರುಗಿಸಲಾಗುವುದಿಲ್ಲ. ತತ್ಕಾಲ್ ಯೋಜನೆ ಅಡಿ ಕಾಯ್ದಿರಿಸುವ ಟಿಕೇಟ್‌ಗೆ ಪ್ರಯಾಣಿಕರಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಐಆರ್‌ಸಿಟಿಸಿಯ ವೆಬ್‌ಸೈಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News