ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Update: 2017-06-19 16:47 GMT

ಬೆಳ್ತಂಗಡಿ,ಜೂ.19: ತಾಲೂಕಿನ ಕೊಯ್ಯೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ರಿಕ್ಷಾದಲ್ಲಿ ಯುವಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಎಂಬ ಆರೋಪದ ಹಿನ್ನಲೆಯಲ್ಲಿ ಯುವತಿ ನಿಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೊಪಿಯನ್ನು ಬಂಧಿಸಿದ್ದಾರೆ.

ಸ್ಥಳೀಯರು ನೀಡುತ್ತಿರುವ ಮಾಹಿತಿಯಂತೆ ಸೋಮವಾರ ಮಧ್ಯಾಹ್ನ ಕೊಯ್ಯೂರಿನಿಂದ ಬರುತ್ತಿದ್ದ ರಿಕ್ಷಾದಲ್ಲಿ ಆರೋಪಿ ಯುವಕ ಉಜಿರೆ ನಿವಾಸಿ ತಾಜುದ್ದೀನ್ ಎಂಬಾತ ಯುವತಿಯ ಮೈಮುಟ್ಟಿ ಕಿರುಕುಳ ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಆಕೆ ರಿಕ್ಷಾದಲ್ಲಿಯೇ ಯುವಕನ ಕೆನ್ನೆಗೆ ಹೊಡೆದಿದ್ದಾಳೆ. ಯುವತಿಯ ಹೊಡೆತಕ್ಕೆ ಬೆಚ್ಚಿದ ಯುವಕ ಆಕೆಯ ಕೆನ್ನೆಗೆ ಹಿಂತಿರುಗಿ ಹೊಡೆದಿದ್ದಾನೆ ಎನ್ನಲಾಗಿದೆ.

ಇವರಿಬ್ಬರ ನಡುವೆ ಗಲಾಟೆ ನಡೆದು ಯುವಕನನ್ನು ಚಾಲಕ ರಿಕ್ಷಾದಿಂದ ಇಳಿಸಿ ಮುಂದೆ ಹೋಗಿದ್ದಾನೆ. ರಿಕ್ಷಾದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನೆಯ ಮಾಹಿತಿ ಹರಡಿ ಕ್ಷಣಮಾತ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಯುವಕನ ಮೇಲೆ ಸೇರಿದ ಜನರು ಹಲ್ಲೆ ನಡೆಸಿದ್ದಾರೆ. ಮಾಹಿತಿ ಪಡೆದು ಬೆಳ್ತಂಗಡಿ ಪೋಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದು ಜನರನ್ನು ಚದುರಿಸಿದ್ದಾರೆ. ಇದೀಗ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಯುವಕ ಪೋಲೀಸ್ ವಶದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News