ಗಲಭೆ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗದಿರಲು ಎಸ್.ಡಿ.ಪಿ.ಐ. ಕರೆ

Update: 2017-06-20 07:35 GMT

ಮಂಗಳೂರು, ಜೂ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಗಲಭೆಗಳ ಲಾಭ ಪಡೆದು ಸಮಾಜವನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ಬೇರ್ಪಡಿಸಿ ಮತ ಗಳಿಸುವ ತಂತ್ರ ಚಾಳಿಯಾಗಿಬಿಟ್ಟಿದೆ. ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ಜಿಲ್ಲಾದ್ಯಂತ ವ್ಯಾಪಿಸುವಂತೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

 ಕಲ್ಲಡ್ಕದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ವೌನ ಮುರಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ರಮಾನಾಥ ರೈ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ನಡೆಸಿದ ಸಮಾಲೋಚನೆಯ ವೇಳೆ ತನ್ನ ಅಸಹಾಯಕತೆ, ನಿರಾಶೆ ಮತ್ತು ಹತಾಶೆ ಹೊರಗೆಡಹಿರುವುದು ಬಹಿರಂಗವಾಗಿದೆ. ತಾನು ಶಾಸಕನಾಗಿದ್ದಾಗ ಪ್ರಭಾಕರ ಭಟ್‌ರನ್ನು ಬಿ.ಸಿ.ರೋಡ್ ನಿಂದ ಓಡಿಸಿದ ಪ್ರಸ್ತಾಪಿಸಿರುವ ರಮಾನಾಥ ರೈಯವರಿಗೆ ಪ್ರಸ್ತುತ ರಾಜ್ಯ ಅರಣ್ಯ ಸಚಿವರಾಗಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಪ್ರಭಾವಿ ಸ್ಥಾನದಲ್ಲಿದ್ದರೂ ಪ್ರಭಾಕರ ಭಟ್‌ರನ್ನು ಬಂಧಿಸಲು ಏಕೆ ಸಾಧ್ಯವಾಗಿಲ್ಲ ಎಂದು ಎಸ್‌ಡಿಪಿಪಿ ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಎಂ.ಅಥಾವುಲ್ಲಾ ಪ್ರಶ್ನಿಸಿದ್ದಾರೆ.

ಎಸ್ಪಿಯೊಂದಿಗೆ ಸಮಾಲೋಚನೆಯಲ್ಲಿ ಸಚಿವರು ಎಸ್.ಡಿ.ಪಿ.ಐ. ಬಗ್ಗೆ ನಿರಾಧಾರ ಚರ್ಚೆ ನಡೆಸಿದ್ದನ್ನು ಗಮನಿಸಿದರೆ ಅವರಿಗೆ ಈ ಪಕ್ಷದ ಬೆಳವಣಿಗೆಯನ್ನು ಸಹಿಸಲಾಗುತ್ತಿಲ್ಲ ಎಂಬುದು ಮನದಟ್ಟಾಗುತ್ತದೆ.

ಈ ಹಿಂದೊಮ್ಮೆ ಕಲ್ಲಡ್ಕದಲ್ಲಿ ರಮಾನಾಥ ರೈ ಸಾಮರಸ್ಯ ಸಮಾವೇಶ ನಡೆಸಿದಾಗ ಅವರಿರುವ ವೇದಿಕೆಗೆ ಸಂಘ ಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದಾಗ ಸ್ವರಕ್ಷಣೆಗಾಗಿ ಕುರ್ಚಿ ಅಡ್ಡ ಹಿಡಿದು ವೇದಿಕೆಯಿಂದ ಪರಾರಿಯಾಗಿರುವುದನ್ನು ಜನರು ಮರೆತಿಲ್ಲ. ಈ ಸಂದರ್ಭದಲ್ಲೇ ಸಂಘಪರಿವಾರದ ಗೂಂಡಾಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ಅಥಾವುಲ್ಲ ಅಭಿಪ್ರಾಯಿಸಿದ್ದಾರೆ. ಇತ್ತೀಚೆಗಿನ ಕಲ್ಲಡ್ಕ ಘಟನೆ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ಇದರ ಹಿಂದೆ ಸಂಘ ಪರಿವಾರ ಮತ್ತು ಅದರ ನಾಯಕರ ಕೈವಾಡದ ಬಗ್ಗೆ ಜಿಲ್ಲೆಯವರೇ ಆಗಿರುವ ಆಹಾರ ಸಚಿವರೇ ಹೇಳಿಕೆ ನೀಡಿದ್ದಾರೆ. ಆದರೆ ಅಂತಹ ಸಂಘಟನೆಗಳ ಮೇಲೆ ಯಾವುದೇ ಕಾನೂನು ಕ್ರಮ ಜರಗಿಸದಿರುವುದರಿಂದ ಅವ್ಯಾಹತವಾಗಿ ಮುಂದುವರಿದಿದೆ ಎಂದು ಅಥಾವುಲ್ಲಾ ಹೇಳಿಕೆಯಲ್ಲಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News