‘ರಾಮನಾಥ ಕೋವಿಂದ ಅವರ ಆಯ್ಕೆ ಸಂತಸ ತಂದಿದೆ’ : ಅಶೋಕ ಚಲವಾದಿ
ಮುಂಡಗೋಡ,ಜೂ.20 : ರಾಮನಾಥ ಕೋವಿಂದ ಅವರನ್ನು ಎನ್.ಡಿ.ಎ. ಒಕ್ಕೂಟವು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಬಿ.ಜೆ.ಪಿ. ಉತ್ತರಕನ್ನಡ ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಚಲವಾದಿ ತಿಳಿಸಿದರು.
ಮುಂಡಗೋಡದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಾರತೀಯ ಜನತಾ ಪಾರ್ಟಿಯ ಎನ್.ಡಿ.ಎ. ಒಕ್ಕೂಟದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದಲಿತ ಸಮುದಾಯದ ರಾಮನಾಥ ಕೋವಿಂದ ಅವರನ್ನು ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಸೆಯಂತೆ ತಳ ಸಮುದಾಯದ ದಲಿತ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ಬಿ.ಜೆ.ಪಿ.ಯು ದೀನದಲಿತರ, ಬಡವರ ಪರವಾಗಿದೆ ಹಾಗೂ ಜಾತಿವಾದಿಗಳ ಪಕ್ಷ ಅಂತಾ ದೂರುತ್ತಿದ್ದ ಪ್ರತಿಪಕ್ಷಗಳಿಗೆ ನಾವು ಜಾತಿವಾದಿಗಳಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದಂತಾಗಿದೆ. ಪ್ರಧಾನಿ ಮೋದಿಜಿಯವರ ‘ಸಬ್ ಕೆ ಸಾಥ್ ಸಬ್ ಕೆ ವಿಕಾಸ್’ ಘೋಷಣೆಯ ಅರ್ಥವನ್ನು ಈ ಆಯ್ಕೆಯು ಸ್ಪಷ್ಟಪಡಿಸುತ್ತದೆ ಎಂದರು.
ಬಿ.ಜೆ.ಪಿ. ಮುಖಂಡರಾದ ಬಸವರಾಜ ಓಶೀಮಠ ಮಾತನಾಡುತ್ತಾ, ಪ್ರಧಾನಿ ಮೋದಿ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು. ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಬಿ.ಜೆ.ಪಿ. ಮುಖಂಡರಾದ ಬಿ.ಎಂ.ರಾಯ್ಕರ್, ಸುಮನ್ ಕುಲಕರ್ಣಿ, ಆರ್.ಜೆ.ಬೆಳ್ಳೆನವರ್ ಮಾತನಾಡಿದರು. ಮುಖಂಡರಾದ ಡಿ.ಜೆ.ಕುಲಕರ್ಣಿ, ವಾಯ್.ಪಿ.ಪಾಟೀಲ, ರಾಘವೇಂದ್ರ ಟಪಾಲದವರ್ ಉಪಸ್ಥಿತರಿದ್ದರು.