ಕೃಷಿಸಾಲ ಮನ್ನಾ ಬಗ್ಗೆ ಕೇಂದ್ರ ಯೋಚಿಸುತ್ತಿಲ್ಲ: ಜೇಟ್ಲಿ

Update: 2017-06-20 12:13 GMT

 ಹೊಸದಿಲ್ಲಿ, ಜೂ.20: ಕೃಷಿಸಾಲ ಮನ್ನಾ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಪರಿಗಣಿಸುತ್ತಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪಂಜಾಬ್ ಸರಕಾರ ರಾಜ್ಯದ ಸುಮಾರು 10 ಲಕ್ಷ ರೈತರ ಸಾಲವನ್ನು ಮನ್ನಾಗೊಳಿಸುವುದಾಗಿ ಪ್ರಕಟಿಸಿದ ಮರುದಿನ ಅವರು ಹೇಳಿಕೆ ನೀಡಿದ್ದಾರೆ. ಕೃಷಿ ಸಾಲಮನ್ನಾ ಬಗ್ಗೆ ಯಾವುದೇ ಪ್ರಸ್ತಾವನೆಯಿಲ್ಲ. ನಾವು ಎಫ್‌ಆರ್‌ಬಿಎಂ ನಿಯಮ ಮತ್ತು ಹಣಕಾಸಿನ ಕೊರತೆ ಬಗ್ಗೆ ಗಮನ ಹರಿಸಬೇಕಾಗಿದೆ ಎಂದವರು ಹೇಳಿದರು.

ಕೇಂದ್ರ ಸರಕಾರದ 2017-18ರ ಸಾಲಿನ ಬಜೆಟ್‌ನಲ್ಲಿ ಹಣಕಾಸಿನ ಕೊರತೆಯನ್ನು ಶೇ.3.2ಕ್ಕೆ ನಿಗದಿಗೊಳಿಸಲಾಗಿದ್ದು ಕಳೆದ ಆರ್ಥಿಕ ಸಾಲಿನಲ್ಲಿ ಇದು ಶೇ.3.5 ಆಗಿತ್ತು.

 ಮಾರ್ಚ್ 2020ರವರೆಗೆ ಬಜೆಟ್ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ನಿಗದಿಗೊಳಿಸುವಂತೆ ಹಾಗೂ 2022-23ರ ವೇಳೆ ಈ ಪ್ರಮಾಣವನ್ನು ಶೇ.2.5ಕ್ಕೆ ಇಳಿಸುವಂತೆ ಮಾಜಿ ಕಂದಾಯ ಕಾರ್ಯದರ್ಶಿ ಎನ್.ಕೆ.ಸಿಂಗ್ ನೇತೃತ್ವದ ‘ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಆ್ಯಂಡ್ ಬಜೆಟ್ ಮ್ಯಾನೇಜ್‌ಮೆಂಟ್ (ಎಫ್‌ಆರ್‌ಬಿಎಂ) ಸಮಿತಿಯು ಶಿಫಾರಸು ಮಾಡಿತ್ತು.

   ಈ ಬಾರಿಯ ಮುಂಗಾರಿನಲ್ಲಿ ಬಂಪರ್ ಬೆಳೆಯಾಗಿದ್ದರೂ ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕೃಷ್ಯುತ್ಪನ್ನಗಳ ಬೆಲೆಯಲ್ಲಿ ತೀವ್ರ ಕುಸಿತವಾದ ಕಾರಣ ರೈತರು ಕಂಗೆಟ್ಟಿದ್ದರು ಹಾಗೂ ಕೃಷಿ ಸಾಲಮನ್ನಾ ಮಾಡುವಂತೆ ಸರಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಉ.ಪ್ರದೇಶ ಸರಕಾರಗಳು ರೈತರ ಸಾಲಮನ್ನಾ ಮಾಡುವುದಾಗಿ ಪ್ರಕಟಿಸಿದ್ದವು. ಇದೀಗ ಪಂಜಾಬ್ ಸರಕಾರ ಕೂಡಾ ಸಣ್ಣ ಮತ್ತು ಬಡರೈತರ 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮತ್ತು ಇದಕ್ಕಿಂತ ಹೆಚ್ಚಿನ ಕೃಷಿ ಸಾಲ ಹೊಂದಿರುವ ಸಣ್ಣ ಮತ್ತು ಬಡರೈತರ ಸಾಲದ ಮೊತ್ತದಿಂದ 2 ಲಕ್ಷ ರೂ. ಸಾಲವನ್ನು  ರದ್ದು ಮಾಡುವುದಾಗಿ ಪ್ರಕಟಿಸಿದೆ.

ಕೃಷಿ ಸಾಲಮನ್ನಾ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರದ ಯಾವುದೇ ಪಾತ್ರ ಇಲ್ಲ ಮತ್ತು ಇದಕ್ಕೆ ಅಗತ್ಯವಾದ ಸಂಪನ್ಮೂಲವನ್ನು ರಾಜ್ಯಗಳೇ ಕ್ರೋಢೀಕರಿಸಿಕೊಳ್ಳಬೇಕು ಎಂದು ಈ ಹಿಂದೆ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News