ಲಾಲೂ ಕುಟುಂಬ ಸದಸ್ಯರ ವಿರುದ್ಧ ಬೇನಾಮಿ ವ್ಯವಹಾರ ದೋಷಾರೋಪ ದಾಖಲು

Update: 2017-06-20 12:48 GMT

ಹೊಸದಿಲ್ಲಿ, ಜೂ.20: ಜಮೀನು ವ್ಯವಹಾರ ಮತ್ತು 1,000 ಕೋಟಿ ರೂ. ತೆರಿಗೆ ತಪ್ಪಿಸಿದ ಪ್ರಕರಣದಲ್ಲಿ ತನಿಖೆ ನಡೆಸಿದ ಆದಾಯ ತೆರಿಗೆ (ಐಟಿ) ಇಲಾಖೆ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್, ಅವರ ಪತ್ನಿ, ಪುತ್ರ ಮತ್ತು ಪುತ್ರಿಯರ ವಿರುದ್ಧ ‘ಬೇನಾಮಿ ವ್ಯವಹಾರ ಕಾಯ್ದೆ’ಯಡಿ ದೋಷಾರೋಪ ದಾಖಲಿಸಿದೆ.

   ಲಾಲೂ ಪುತ್ರಿ ಮೀಸ ಭಾರತಿ ಮತ್ತವರ ಪತಿ ಶೈಲೇಶ್ ಕುಮಾರ್, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ , ಪುತ್ರಿಯರಾದ ಚಂದಾ ಮತ್ತು ರಾಗಿಣಿ ಯಾದವ್ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಐಟಿ ನೋಟಿಸ್ ಜಾರಿ ಮಾಡಿದೆ. ಇವರೆಲ್ಲ ಬೇನಾಮಿಯಾಗಿ ಸಂಪಾದಿಸಿದ ಆಸ್ತಿಯ ಫಲಾನುಭವಿಗಳು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇವರು ದಿಲ್ಲಿ ಮತ್ತು ಪಾಟ್ನದಲ್ಲಿ ಹೊಂದಿರುವ ಕಟ್ಟಡ, ಪ್ಲಾಟ್‌ಗಳು ಮತ್ತು ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಸ್ಥಿರಾಸ್ತಿಗಳ ‘ದಸ್ತಾವೇಜು ’ ವೌಲ್ಯ 9.32 ಕೋಟಿ ರೂ. ಎಂದು ನಮೂದಿತವಾಗಿದ್ದರೂ ಇವುಗಳ ಹಾಲಿ ಮಾರುಕಟ್ಟೆ ದರ 170ರಿಂದ 180 ಕೋಟಿ ರೂ. ಎಂದು ಐಟಿ ಇಲಾಖೆ ತಿಳಿಸಿದೆ. ಪಾಟ್ನದ ಫುಲ್ವಾರಿ ಶರಿಫ್‌ನಲ್ಲಿರುವ 9 ಪ್ಲಾಟ್‌ಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

 ಕಳೆದ ತಿಂಗಳು ಐಟಿ ಇಲಾಖೆ ಬೇನಾಮಿ ಆಸ್ತಿಗಳ ಪತ್ತೆಗಾಗಿ ದೇಶಾದ್ಯಂತ ದಾಳಿ ನಡೆಸಿತ್ತು. ಆದರೆ ತಮ್ಮ ಕುಟುಂಬ ಸದಸ್ಯರ ಮನೆ ಮತ್ತು ಕಚೇರಿ ಮೇಲೆ ನಡೆದಿದ್ದ ದಾಳಿಯನ್ನು ಟೀಕಿಸಿದ್ದ ಲಾಲೂ, ತಾನು ಇದರಿಂದ ವಿಚಲಿತನಾಗಿಲ್ಲ ಎಂದಿದ್ದರು. ಲಾಲೂ ಧ್ವನಿಯನ್ನು ಕುಂದಿಸುವಷ್ಟು ಧೈರ್ಯ ಬಿಜೆಪಿಯವರಲ್ಲಿಲ್ಲ. ಒಂದು ವೇಳೆ ಲಾಲೂ ಧ್ವನಿಯನ್ನು ಉಡುಗಿಸಲು ಅವರು ಧೈರ್ಯ ಮಾಡಿದರೆ ಕೋಟ್ಯಾಂತರ ಲಾಲೂಗಳು ಮುಂದೆ ಬರಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News