ದರೋಡೆ ತಡೆದ ಸಹೋದರರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದರು

Update: 2017-06-20 13:02 GMT

ಬಿಹಾರ, ಜೂ.20: ದರೋಡೆಯನ್ನು ತಡೆಯಲೆತ್ನಿಸಿದ ಮೂವರು ಸಹೋದರರನ್ನು ರೈಲಿನಿಂದ ಹೊರಗೆಸೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಅಸ್ಸಾಂನಿಂದ ಆಗಮಿಸಿದ್ದ ಸಹೋದರರು ಹೌರಾ ಗುವಾಹಟಿ ಕಾಮ್ರೂಪ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸ್ಥಳೀಯರಿಗೆ ರೈಲ್ವೆ ಹಳಿಗಳಲ್ಲಿ ರಕ್ತಸಿಕ್ತವಾದ ಸಹೋದರರು ಕಾಣಿಸಿದ್ದು, ಈ ಸಂದರ್ಭ ಪರಿಶೀಲಿಸಿದಾಗ ಪಂಚು ಸತ್ನಾಮಿ ಎಂದಾತ ಮೃತಪಟ್ಟಿದ್ದ. ಅನಿಲ್ ಸತ್ನಾಮಿ ಹಾಗೂ ಬೋನು ಸತ್ನಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉತ್ತರ ಬಂಗಾಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಜೊತೆಗಿದ್ದವರನ್ನು ದರೋಡೆಕೋರರು ದೋಚಿದ್ದಲ್ಲದೆ, ರೈಲಿನಿಂದ ಹೊರಗೆಸೆಯುವ ಮುನ್ನ ಹಲ್ಲೆ ನಡೆಸಿದ್ದರು ಎಂದು ಅನಿಲ್ ಸತ್ನಾಮಿ ಹೇಳಿರುವುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅನಿಲ್ ನಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಬೋನು ಸತ್ನಾಮಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News