×
Ad

​ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕು: ವಿಎಚ್‌ಪಿ ಆರೋಪ

Update: 2017-06-20 18:52 IST

ಮಂಗಳೂರು, ಜೂ. 20: ಜಿಲ್ಲೆಯಲ್ಲಿ ನಡೆಯುವ ಗಲಭೆ, ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಅದನ್ನು ಮರೆಮಾಚಿ ಹಿಂದೂಗಳೇ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಕೋಮು ಭಾವನೆ ಹಚ್ಚಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಗಲಭೆ ಪ್ರಕರಣಗಳನ್ನು ಸರಕಾರ ಸಿಬಿಐಗೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಒತ್ತಾಯಿಸಿದೆ.

ಮಂಗಳವಾರ ನಗರದ ವಿಹಿಂಪ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಜಿಲ್ಲೆಯಲ್ಲಿ ಅಶಾಂತಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗುತ್ತಿದ್ದಾರೆ ಎಂಬುದು ಸಚಿವ ರಮಾನಾಥ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿದ ಮಾತುಗಳ ವೀಡಿಯೋ ಸಾಕ್ಷಿಯಾಗಿದೆ. ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ ಭಟ್‌ರನ್ನು ಏಕವಚನದಲ್ಲಿ ಸಂಭೋದಿಸಿ 307 ಕೇಸು ದಾಖಲಿಸಿ ಎಂದು ಸಚಿವರು ಸೂಚಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕೋಸ್ಕರ ಸಚಿವರು ಒಂದು ವರ್ಗವನ್ನು ಓಲೈಸುವ ಉದ್ದೇಶದಿಂದ ಜಿಲ್ಲೆಯ ಗಲಭೆಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಸಚಿವರ ಹೇಳಿಕೆ ಈಗ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ. ಪೊಲೀಸ್ ಅಧಿಕಾರಿಗಳು ಸಚಿವರ ತಾಳಕ್ಕೆ ಕುಣಿಯದಿದ್ದರೆ ವರ್ಗಾಯಿಸಲಾಗುತ್ತದೆ. ನಗರ ಪೊಲೀಸ್ ಕಮೀಷನರ್ ಅವರನ್ನೂ ಇದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ರಮಾನಾಥ ರೈ ಪೊಲೀಸರನ್ನು ನಿಷ್ಪಕ್ಷಪಾತ ತನಿಖೆ ಮಾಡಲು ಬಿಡುತ್ತಿಲ್ಲ. ಹೀಗಾಗಿ ಎಲ್ಲ ಗಲಭೆ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸುತ್ತಿದ್ದೇವೆ ಎಂದರು.

ಜೂ.24ರ ಪ್ರತಿಭಟನೆಗೆ ಬೆಂಬಲ

 ಅಕ್ರಮ ಗೋಸಾಗಾಣಿಕೆ, ಮತೀಯ ಉಗ್ರವಾದ, ಲವ್ ಜಿಹಾದ್, ದೇವಸ್ಥಾನ-ಮಂದಿರಗಳ ಮೇಲೆ ದಾಳಿ ಮೊದಲಾದ ಕಾರ್ಯಚಟುವಟಿಕೆಗಳನ್ನು ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಜೂ.24ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಯಲಿದೆ. ಇದನ್ನು ವಿಹಿಂಪ-ಬಜರಂಗ ದಳ ಬೆಂಬಲಿಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ಹಲವಾರು ಮುಖಂಡರು ಭಾಗವಹಿಸಲಿದ್ದು, ಜಿಲ್ಲೆಯ ವಿವಿಧೆಡೆಯಿಂದ ವಿಹಿಂಪ -ಬಜರಂಗ ದಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪುವೆಲ್, ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಪ್ರವೀಣ್ ಕುತ್ತಾರ್, ಪುನೀತ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News