×
Ad

ಆಯೋಗದಲ್ಲಿ ಪ್ರತೀ ವರ್ಷ ಸರಾಸರಿ 6 ಸಾವಿರ ದೂರುಗಳು ದಾಖಲು: ಮೀರಾ ಸಕ್ಸೆನಾ

Update: 2017-06-20 19:41 IST

ಉಡುಪಿ, ಜೂ.20: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಈವರೆಗೆ ಒಟ್ಟು 66,991 ದೂರುಗಳು ಬಂದಿದ್ದು, ಇವುಗಳಲ್ಲಿ ಸುಮಾರು 58,740 ದೂರು ಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,131 ದೂರುಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1,009 ವಿಲೇವಾರಿ ಮಾಡಲಾಗಿದೆ. ಇನ್ನು 122 ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ. ಸಕ್ಸೇನಾ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಉಡುಪಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ, ಅಕಾಡೆಮಿ ಆಫ್ ಗಾಂಧಿಯನ್ ಸ್ಟಡೀಸ್‌ನ ಸಹಯೋಗದೊಂದಿಗೆ ಮಂಗಳವಾರ ಉಡುಪಿ ಜಿಪಂ ಸಭಾಂಗಣದಲ್ಲಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾದ ಮಾನವ ಹಕ್ಕು, ಲಿಂಗತ್ವ ಸಮಾನತೆ, ಮಾನವ ಮತ್ತು ಮಕ್ಕಳ ಕಳ್ಳಸಾಗಾಣಿಕೆ, ಮಾನವ ಮತ್ತು ಪರಿಸರ ಹಕ್ಕು ಸಂರಕ್ಷಣೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಆಯೋಗಕ್ಕೆ ಪ್ರತಿವರ್ಷ ಸರಾಸರಿ ಆರು ಸಾವಿರ ದೂರುಗಳು ಬರುತ್ತವೆ. ಇತ್ಯರ್ಥಕ್ಕೆ ಬಾಕಿ ಇರುವ ಸುಮಾರು 8,000 ದೂರುಗಳು ಬೇರೆ ಬೇರೆ ಹಂತದಲ್ಲಿವೆ. ಈವರೆಗೆ ಒಟ್ಟು 9,000 ಸ್ವಯಂಪ್ರೇರಿತ ದೂರುಗಳನ್ನು ಸಹ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆಯೋಗಕ್ಕೆ ಅತಿ ಹೆಚ್ಚು ದೂರುಗಳು ಬೆಂಗಳೂರು, ಮೈಸೂರುಗಳಿಂದ ಬರುತ್ತಿವೆ. ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿ ರುವುದಲ್ಲದೆ ಉಲ್ಲಂಘನೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ. ಭೂವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ. ಆದರೆ ನ್ಯಾಯಾಲಯದಲ್ಲಿ ತೀರ್ಮಾನಗೊಂಡ ಹಾಗೂ ವಿಚಾರಣೆಯಲ್ಲಿರುವ ಪ್ರಕರಣಗಳ ದೂರುಗಳನ್ನು ಆಯೋಗ ಸ್ವೀಕರಿಸುವುದಿಲ್ಲ. ಅದೇ ರೀತಿ ಕೌಟುಂಬಿಕ ವಿವಾದಗಳ ಕುರಿತ ದೂರುಗಳು ಕೂಡ ಹೆಚ್ಚು ಬರುತ್ತವೆ ಎಂದರು.

ಆಯೋಗದ ಹೆಸರು ಬಳಸಿಕೊಂಡು ಕೆಲವು ವ್ಯಕ್ತಿಗಳು ವಂಚನೆ, ಕಾನೂನು ಉಲ್ಲಂಘನೆಯಂತಹ ಚಟುವಟಿಕೆ ನಡೆಸುತ್ತಿದ್ದು, ಅಂತಹವರ ವಿರುದ್ದ ದೂರು ನೀಡಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಾಹನಗಳ ಮೇಲೆ ಮಾನವ ಹಕ್ಕುಗಳ ಸಂಘಟನೆಯ ಹೆಸರನ್ನು ಸರಕಾರಿ ಇಲಾಖೆಯ ಮಾದರಿಯಲ್ಲಿ ಹಾಕಿಸಿಕೊಂಡು ಸಂಚರಿಸುವವರ ಕುರಿತು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪೊಲೀಸರು ಮನೆಯವರಿಗೆ ಮಾಹಿತಿ ಕೊಡದೆ ಅಥವಾ ಸಮವಸ್ತ್ರ ಧರಿಸದೆ ಯಾರನ್ನು ಕೂಡ ವಿಚಾರಣೆಗೆ ಕರೆದುಕೊಂಡು ಹೋಗುವಂತೆ ಇಲ್ಲ. ಆ ರೀತಿ ಮಾಡಿದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಕ್ರಮ, ಅನ ಧಿಕೃತ ಕಟ್ಟಡಗಳಿಗೆ ಯಾವುದೇ ರೀತಿಯ ಬೆಂಬಲವನ್ನು ಆಯೋಗ ನೀಡಲ್ಲ. ಅಂತಹ ದೂರುಗಳು ಬಂದರೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಅವರು ಹೇಳಿದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು. ಜಿಪಂ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾದ ನಿರ್ದೇಶಕಿ ಬೃಂದಾ ಅಡಿಗೆ ವಂದಿಸಿದರು. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News