×
Ad

ಕಂದಾಯ ಇಲಾಖೆಯ ಸಮಸ್ಯೆಗಳಿಗೆ ಅಸ್ಪಷ್ಟ ಉತ್ತರ : ಸದಸ್ಯರು ಮತ್ತು ಅಧಿಕಾರಿಗಳ ಮಾತಿನ ಚಕಮಕಿ

Update: 2017-06-20 20:05 IST

ಬೆಳ್ತಂಗಡಿ,ಜೂ.20: ಕಂದಾಯ ಇಲಾಖೆಯಲ್ಲಿನ ಹಲವಾರು ಸಮಸ್ಯೆಗಳಿಗೆ ತಹಸೀಲ್ದಾರರು  ನೀಡಿದ ಅಸ್ಪಷ್ಟ ಉತ್ತರಗಳಿಂದಾಗಿ, ಮಂಗಳವಾರ ನಡೆದ ತಾಲೂಕು ಪಂ.ಸಭೆ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಭಾರೀ ವಾಗ್ಯುದ್ಧಕ್ಕೆ ಕಾರಣವಾಯಿತು.ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ವೇಣೂರಿನ ಅಜಿಲ ಕೆರೆಯ ಸುಮಾರು ಎಂಟೂವರೆ ಎಕರೆ ಸರಕಾರಿ ಜಮೀನು ಅತಿಕ್ರಮಣವಾಗಿದೆ. ಈ ಬಗ್ಗೆ 2013 ರಿಂದ ತಾ.ಪಂ.ಸಭೆಯಲ್ಲಿ ಪ್ರಸ್ತಾವಿಸುತ್ತಾ ಬಂದರೂ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಉಚ್ಛ ನ್ಯಾಯಾಲಯ ಪ್ರಕರಣವನ್ನು ತೆಗೆದು ಹಾಕಿದೆ ಮತ್ತೆ ಅದು ಎಸಿ ನ್ಯಾಯಾಲಯಕ್ಕೆ ಯಾಕೆ ಹೋಯಿತು ಎಂದು ಸದಸ್ಯ ವಿಜಯಗೌಡ ಪ್ರಶ್ನಿಸಿದಾಗ ಇದು ಎಸಿ ಕೋರ್ಟ್‌ನಲ್ಲಿರುವುದರಿಂದ ಮಾತನಾಡಲು ಸಾಧ್ಯವಿಲ್ಲ. ತನಿಖೆ ಆದ ಮೇಲೆ ಪಂ.ಹಸ್ತಾಂತರಿಸಲಾಗುವುದು ಮತ್ತು ಕೂಡಲೇ ಪಹಣಿ ಪತ್ರ ಕೂಡ ಮಾಡಿ ಕೊಡಲಾಗುವುದು ಎಂದರು.

 ಮಾಲಾಡಿ ಗ್ರಾ.ಪಂ.ವ್ಯಾಪ್ತಿಯ ಮಾಜಿ ಸೈನಿಕರಾದ ನೆಲ್ಸನ್ ಲಸ್ರೋದೋ, ವಿಕ್ಟರ್ ರೋಡ್ರಿಗಸ್ ಅವರು 2005ರಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತಲ್ಲದೆ ಮಂಜೂರು ಮಾಡಲು ಆದೇಶವೂ ಆಗಿತ್ತು. ಆದರೆ ಇದುವರೆಗೂ ಮಂಜೂರು ಆಗದಿರುವ ಬಗ್ಗೆ ಸದಸ್ಯ ಜೋಯೆಲ್ ಪ್ರಸ್ತಾವಿಸಿದರು. ಈ ವಿಚಾರದಲ್ಲಿ ಸದಸ್ಯರ, ತಹಸೀಲ್ದಾರ್ ಹಾಗು ಕಾರ್ಯನಿರ್ವಹಣಾಧಿಕಾರಿ ನಡುವೆ ಭಾರೀ ಚರ್ಚೆ ನಡೆಯಿತು. ತಾಲೂಕು ಕಚೇರಿಯಲ್ಲಿ ಕಡತಗಳೇ ನಾಪತ್ತೆಯಾಗುತ್ತಿದ್ದು ಹಲವಾರು ಕಡತಗಳು ಸಂಜೆ ಐದು ಗಂಟೆ ಬಳಿಕ ತಾ.ಕಚೇರಿಯಿಂದ ಹೊರಗೆ ಬಂದು ಕ್ಸೆರೋಕ್ಸ್ ಆಗಿ ಮರಳುತ್ತವೆ.

ಇದರಿಂದ ಕೊಟ್ಟ ಅರ್ಜಿಗಳೇ ಇಲ್ಲವಾಗುತ್ತಿವೆ. ಯಾವ ಪತ್ರ ಕೊಟ್ಟರೂ ಇಲಾಖೆಯಲ್ಲಿ ಇರುವುದಿಲ್ಲ. ಈ ಸಮಸ್ಯೆಯಿಂದಾಗಿ ಮಾಜಿ ಸೈನಿಕರಿಗೆ ಮಾತ್ರವಲ್ಲ ಹಲವಾರು ಬಡವರಿಗೆ ತೊಂದರೆ ಆಗುತ್ತಿದೆ. ಬ್ರೋಕರ್‌ಗಳನ್ನು ನಿಯಂತ್ರಿಸಬೇಕು ಎಂದು ಸದಸ್ಯರುಗಳು ಆರೋಪಿಸಿದರು. ತಹಸೀಲ್ದಾರ್ ಅವರು ಕಂದಾಯ ಇಲಾಖೆಯ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ಹದಿನೈದು ದಿನಗಳ ಮೊದಲು ನನಗೆ ತಿಳಿಸಿದಲ್ಲಿ ಸಭೆಯಲ್ಲಿ ಉತ್ತರ ಸಮರ್ಪಕ ಉತ್ತರ ನೀಡಲು ಆಗುತ್ತದೆ ಎಂದಾಗ ಸದಸ್ಯರ ಮತ್ತು ತಹಸೀಲ್ದಾರರ ನಡುವೆ ವಾದವಿವಾದ ನಡೆಯಿತು.

ಆಧಾರ್ ಕಾರ್ಡ್ ಮಾಡಲು ಹಣ ಕೊಡುಬೇಕಾಗಿಲ್ಲ. ಅಂತಹದ್ದೇನಾದರೂ ಕಂಡು ಬಂದಲ್ಲಿ ನನಗೆ ತಿಳಿಸಿ ಎಂದು ತಹಸೀಲ್ದಾರ್ ಸೂಚಿಸಿದರು. ತಾಲೂಕಿಗೆ 366 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ರೂ. 18.54 ಕೋಟಿ ಮಂಜೂರಾಗಿವೆ. ಪುತ್ತೂರಿನ ಲೆವಿನಾ ಇಲೆಕ್ಟ್ರಿಕಲ್ಸ್ ಈ ಒಂದು ವರ್ಷದೊಳಗೆ ಅದನ್ನು ಬೇಕಾದಲ್ಲಿ ಅಳವಡಿಸಲಿದ್ದಾರೆ. ಈಗಾಗಲೇ 15 ಟಿಸಿ ಅಳವಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಶಿವಶಂಕರ್ ಮಾಹಿತಿ ನೀಡಿದರು. ಪರಿವರ್ತಕಗಳ ಪಟ್ಟಿಯನ್ನು ನೀಡುವಂತೆ ಸದಸ್ಯರು ವಿನಂತಿಸಿದರು.

ಸರಕಾರಿ ಬಸ್ಸುಗಳ ಕೆಲವೆಡೆ ವಿದ್ಯಾರ್ಥಿಗಳಿಗೆ ಅನೂಕೂಲಕರ ಸಮಯದಲ್ಲಿ ಬರದಿರುವ ಬಗ್ಗೆ, ಕೆಲವಡೆ ಬಸ್ಸು ಮಂಜೂರಾಗಿ ಒಂದು ವರ್ಷವಾದರೂ ಬಸ್ಸುಗಳು ಓಡಾಡದಿರುವ ಬಗ್ಗೆ ಸದಸ್ಯರು ಪ್ರಸ್ತಾವಿಸಿದರು. ತಾಲೂಕಿನಲ್ಲಿ ಹೆಚ್ಚುವರಿ ಸರಕಾರಿ ಬಸ್ಸುಗಳನ್ನು ಓಡಿಸಲು ಸಿಬ್ಬಂದಿ ಹಾಗು ಬಸ್‌ಗಳ ಕೊರತೆ ಇದೆ. ಸ್ಥಳೀಯರು ಯಾರೂ ಕೆಲಸಕ್ಕೆ ಸಿಗುತ್ತಿಲ್ಲ. ಹೊರಗಿನವರು ಆಯ್ಕೆಯಾದರೂ ಇಲ್ಲಿಗೆ ಬಂದು ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಬಸ್ಸುಗಳ ಸಮಯ ಬದಲಾವಣೆ ಮಾಡಲಿದ್ದೇವೆ ಎಂದು ನಿಗಮದ ಅಧಿಕಾರಿ ಉತ್ತರಿಸಿದರು.

ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಬಸ್ಸುಗಳನ್ನು ಓಡಿಸಬೇಕು ಎಂದು ಸದಸ್ಯರು ಹೇಳಿದಾಗ ಈ ಬಗ್ಗೆ ನಮಗೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದಾಗ ಈ ಸಂಬಂಧ ಕೆಲ ಹೊತ್ತು ಚರ್ಚೆ ನಡೆಯಿತು. ಬಸ್ಸು ಬೇಕಾದಲ್ಲಿ ನಿಗಮದ ಮೇಲಧಿಕಾರಿಗೆ ನಿರ್ಣಯ ಮಾಡಿ ಕಳುಹಿಸುವುದು ಎಂದು ತೀರ್ಮಾನಿಸಲಾಯಿತು.

       ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ, ತಹಸೀಲ್ದಾರ್ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ವೇದಾವತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News