ಸರಕಾರಿ ಆಸ್ಪತ್ರೆಯ ನೌಕರರ ವರ್ಗಾವಣೆಗೆ ಆಗ್ರಹ
ಉಡುಪಿ, ಜೂ.20: ಜಿಲ್ಲೆಯ ನಾನಾ ಕಡೆಗಳಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ 10-15 ವರ್ಷಗಳಿಗೂ ಹೆಚ್ಚು ಸಮಯದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿಗಳನ್ನು ಕೂಡಲೇ ಬೇರೆ ಕಡೆಗಳಿಗೆ ವರ್ಗಾವಣೆ ಮಾಡುವಂತೆ ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕಳೆದ 10-15 ವರ್ಷಗಳಿಂದ ವರ್ಗಾವಣೆ ಇಲ್ಲದೇ ಒಂದೇ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ವೈದ್ಯರು ಮತ್ತು ಇತರ ಸಿಬ್ಬಂದಿಗಳನ್ನು ತಕ್ಷಣ ಬೇರೆ ಜಿಲ್ಲೆಗೆ ವರ್ಗಾಯಿಸಿ ಬೇರೆ ಜಿಲ್ಲೆಯವರನ್ನು ಇಲ್ಲಿಗೆ ನೇಮಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಕಳುಹಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ ದಿನನಿತ್ಯ ಎದುರಾಗುತಿದ್ದು, ಇದನ್ನು ನಿಭಾಯಿಸುವಲ್ಲಿ ಜಿಲ್ಲಾ ಅರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಹಾಗೂ ಸರಕಾರಿ ಆಸ್ಪತ್ರೆಯ ಕೆಲಸದ ಸಮಯದಲ್ಲಿ ಖಾಸಗಿ ಕ್ಲಿನಿಕ್ ನಡೆಸುವುದು ಮತ್ತು ಬಡ ರೋಗಿಗಳನ್ನು ನಿರ್ಲಕ್ಷಿಸುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ದೂರಿದ್ದಾರೆ.