ಮುಸ್ಲಿಮರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಸಂಭ್ರಮಾಚರಿಸಿದ ತೀವ್ರ ಬಲಪಂಥೀಯರು

Update: 2017-06-20 15:05 GMT

ಲಂಡನ್, ಜೂ.20: ಇಲ್ಲಿಯ ಫಿನ್ಸ್ ಬರಿ ಪಾರ್ಕ್ ಬಳಿಯ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಹೊರಬರುತ್ತಿದ್ದ ಜನರ ಮೇಲೆ ವ್ಯಕ್ತಿಯೋರ್ವ ವ್ಯಾನ್ ನುಗ್ಗಿಸಿದ ಪ್ರಕರಣದ ಬಗ್ಗೆ ತೀವ್ರ ಬಲಪಂಥೀಯ ಸಂಘಟನೆಯವರು ಸಂಭ್ರಮ ಹಂಚಿಕೊಳ್ಳುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಾನ್ ನುಗ್ಗಿಸಿದ ದುಷ್ಕರ್ಮಿಯನ್ನು "ಹೀರೊ" ಎಂದು ವಿಡಿಯೋದಲ್ಲಿ ಬಣ್ಣಿಸಲಾಗಿದ್ದು ಈತನಿಗೆ "ಶೌರ್ಯ ಪದಕ" ನೀಡಬೇಕು ಎಂದು ಹೇಳಲಾಗಿದೆ. ಇನ್ನೊಂದು ದೃಶ್ಯದಲ್ಲಿ ನಾಝಿ ಧ್ವಜದ ಎದುರು ನಿಂತಿರುವ ವ್ಯಕ್ತಿಯೋರ್ವ, ಓರ್ವ ಬಿಳಿಯ ವ್ಯಕ್ತಿ ಮುಸ್ಲಿಮರ ಗುಂಪಿನ ಮೇಲೆ ಆಕ್ರಮಣ ಮಾಡಿದ್ದು ಖುಷಿಯಾಗಿದೆ ಎಂದು ಹೇಳುವ ದೃಶ್ಯವಿದೆ. 

ಜೆರ್ಮೆನಿಯ ಎಂದು ತನ್ನನ್ನು ಕರೆಸಿಕೊಂಡಿರುವ ಅಮೆರಿಕನ್ ವ್ಯಕ್ತಿಯೋರ್ವ ಯು ಟ್ಯೂಬ್ ನಲ್ಲಿ ವೀಡಿಯೊ ಒಂದನ್ನು ಅಪ್‍ಲೋಡ್ ಮಾಡಿದ್ದಾನೆ. "ಅಭಿನಂದನೆಗಳು ಸಂಗಾತಿಗಳೇ, ನನಗೆ ಈಗ ಭಾರೀ ಖುಷಿಯಾಗಿದೆ. ಈ ದಿನ ಅದ್ಭುತ `ಅಪ್ಪಂದಿರ ದಿನವಾಗಿ' ಪರಿಣಮಿಸಿತು. ಇನ್ನು ಮುಂದೆ ಇದು ಮುಂದುವರಿಯಲಿದೆ. ಒಳ್ಳೆಯ ಕಾರ್ಯ ಮಾಡಿದಿರಿ" ಎಂದಾತ ಹೇಳಿದ್ದಾನೆ. 

"ಫಾರ್ ರೈಟ್ ಗ್ರೂಪ್ ಬ್ರಿಟನ್ ಫಸ್ಟ್" ಎಂಬ ಫೇಸ್‍ಬುಕ್ ಸಂಘಟನೆಯ ಪುಟದಲ್ಲಿ ದಾಳಿಕೋರನನ್ನು "ಧೀರ ಹೀರೋ" ಎಂದು ಬಣ್ಣಿಸಲಾಗಿದೆ. 
ಫಿನ್ಸ್ ಬರಿ ಘಟನೆ ಇಸ್ಲಾಂ ವಿರುದ್ಧ ವಿಶ್ವದಾದ್ಯಂತ ನಡೆಯಲಿರುವ ಯುದ್ಧಕ್ಕೆ ಮುನ್ನುಡಿಯಾಗಿದೆ ಎಂದು ಟ್ವಿಟರ್‍ನಲ್ಲಿ ಬರೆಯಲಾಗಿದೆ. 
ಮುಸ್ಲಿಮರ ವಿರುದ್ಧ ಯುದ್ಧ ಆರಂಭವಾಗುವಾಗ ಖಂಡಿತ ಫಿನ್ಸ್ ಬರಿ ಪಾರ್ಕ್ ದಾಳಿಯನ್ನು ಸ್ಮರಿಸಲಾಗುತ್ತದೆ. ಸರಕಾರ ವಿಫಲವಾಗಿದೆ. ಜನರೇ ಪ್ರತಿಕ್ರಮಕ್ಕೆ ಮುಂದಾದರು ಎಂದು ಇನ್ನೋರ್ವ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. 

ದಾಳಿಗೂ ಮುನ್ನ "ಇಂಗ್ಲಿಷ್ ಡಿಫೆನ್ಸ್ ಲೀಗ್"ನ ಸ್ಥಾಪಕ ಟಾಮಿ ರಾಬಿನ್ಸನ್ ಪೋಸ್ಟ್ ಮಾಡಿದ್ದ ವೀಡಿಯೋದಲ್ಲಿ- "ಕ್ರೋಧಿತ ಪ್ರಜೆಗಳು ಇಸ್ಲಾಮಿಕ್ ಸಮಸ್ಯೆಗೊಂದು ಇತಿಶ್ರೀ ಹೇಳಲಿದ್ದಾರೆ" ಎಂದು ಹೇಳಿರುವ ಹೇಳಿಕೆಯನ್ನೂ ಟ್ವೀಟರ್‍ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಆದರೆ ಈ ವೀಡಿಯೊ ದೃಶ್ಯಾವಳಿಯನ್ನು ಗೂಗಲ್ ಅಳಿಸಿ ಹಾಕಿದ್ದು, ಈ ರೀತಿಯ ವೀಡಿಯೊಗಳಿಗೆ ಗೂಗಲ್‍ನಲ್ಲಿ ಸ್ಥಾನವಿಲ್ಲ ಎಂದು ಅದು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News