ಪಠಾಣ್‌ಕೋಟ್ ವಾಯುನೆಲೆ ದಾಳಿಗೆ ಭದ್ರತಾ ಲೋಪ ಕಾರಣ

Update: 2017-06-20 18:11 GMT

ಹೊಸದಿಲ್ಲಿ, ಜೂ.20: ಕಳೆದ ಜನವರಿಯಲ್ಲಿ ಭಯೋತ್ಪಾದಕರ ದಾಳಿಗೆ ಗುರಿಯಾಗಿದ್ದ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಪ್ರಮುಖ ಭದ್ರತಾ ಲೋಪ ಇರುವುದಾಗಿ ಐಎಎಫ್ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಆ ಬಳಿಕ ನೇತೃತ್ವ ಮತ್ತು ನಿಯಂತ್ರಣ ಕಾರ್ಯದಲ್ಲಿ ಆಗ ಏರ್‌ಕಮಾಂಡರ್ ಆಗಿದ್ದ ಜೆ.ಎಸ್.ಧಮೂನ್ ವಿಫಲರಾಗಿದ್ದರು ಎಂದೂ ತನಿಖೆಯ ವರದಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಆಗ ಏರ್ ಕಮಾಂಡರ್ ಆಗಿದ್ದ ಜೆ.ಎಸ್.ಧಮೂನ್ ಅವರು ರಾಜೀನಾಮೆ ನೀಡಿದ್ದಾರೆ.

  ಐಎಎಫ್ ತನಿಖೆಯಲ್ಲಿ ಏರ್‌ಕಮಾಂಡರ್ ಮತ್ತು ಇತರರ ವೈಫಲ್ಯವನ್ನು ಎತ್ತಿಹಿಡಿದಿರುವ ಜೊತೆಗೆ, ವಾಯುನೆಲೆಯ ಒಳಗೆ ಮತ್ತು ಹೊರಗೆ ಗಂಭೀರ ಭದ್ರತಾ ವೈಫಲ್ಯ ಇರುವುದನ್ನು ತಿಳಿಸಲಾಗಿದೆ. ಅಸಮರ್ಪಕ ಫ್ಲಡ್‌ಲೈಟ್ ವ್ಯವಸ್ಥೆ, ದಾಳಿಕೋರರನ್ನು ಆರಂಭದಲ್ಲೇ ಗುರುತಿಸಿ ಅವರನ್ನು ನಿಷ್ಕ್ರಿಯಗೊಳಿಸುವಲ್ಲಿ ಐಎಎಫ್ ಕಾವಲು ಕಮಾಂಡೋಗಳ ವೈಫಲ್ಯ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ದಾಳಿಯ ಬಳಿಕ ಧಮೂನ್ ಅವರನ್ನು ಹೊಸದಿಲ್ಲಿಯ ಐಎಎಫ್ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿತ್ತು.

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಯುಪಡೆಯ ಉನ್ನತ ಅಧಿಕಾರಿಯೋರ್ವರು, ಏರ್‌ಕಮಾಂಡರ್ ಅವರನ್ನು ಉಚ್ಚಾಟಿಸಲಾಗಿಲ್ಲ. ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ತನಿಖಾ ಸಮಿತಿ ನೀಡಿದ ವರದಿ ಪರಿಶೀಲನಾ ಹಂತದಲ್ಲಿದೆ ಎಂದು ಹೇಳಿದ್ದಾರೆ. ಪಠಾಣ್‌ಕೋಟ್ ವಾಯುನೆಲೆ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಲೆ.ಜ. ಫಿಲಿಪ್ ಕಂಪೊಸ್ (ನಿವೃತ್ತ) ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News