ಬೆಂಜನಪದವು: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷರ ಬರ್ಬರ ಹತೈ

Update: 2017-06-21 08:38 GMT

ಬಂಟ್ವಾಳ, ಜೂ.21: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷರನ್ನು ಮಾರಕಾಯುಧಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಜನಪದವಿನ ಕರಾವಳಿ ಕಾಲೇಜು ಬಳಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಮಲ್ಲೂರು ಅಮ್ಮುಂಜೆಯ ಕಲಾಯಿ ನಿವಾಸಿ ಅಶ್ರಫ್(35) ಎಂದು ಗುರುತಿಸಲಾಗಿದೆ. ಕಲಾಯಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ ಬಾಡಿಗೆಗೆಂದು ಕಳ್ಳಿಗೆ ಗ್ರಾಮದ ಬೆಂಜನಪದವಿನ ಕರಾವಳಿ ಸೈಟ್ ಎಂಬಲ್ಲಿಗೆ ಇಂದು ಬೆಳಗ್ಗೆ ತೆರಳಿದ್ದ ವೇಳೆ ಈ ಹತ್ಯೆ ನಡೆದಿದೆ.

ಕರಾವಳಿ ಸೈಟ್‌ನಲ್ಲಿ ಬೀಡಿ ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಬಾಡಿಗೆಗೆ ಅಶ್ರಫ್ ಅವರ ರಿಕ್ಷಾದಲ್ಲಿ ತೆರಳಿದ್ದರು. ಅಶ್ರಫ್ ಅಲ್ಲಿ ಮನೆಯೊಂದರ ಎದುರು ರಿಕ್ಷಾವನ್ನು ನಿಲ್ಲಿಸಿದ್ದ ವೇಳೆ ಮೂರು ಬೈಕ್‌ಗಳಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದೆ.

ದುಷ್ಕರ್ಮಿಗಳು ತಲವಾರು ಸಹಿತ ಮಾರಕಾಸ್ತ್ರಗಳಿಂದ ಅಶ್ರಫ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪಾರಾಗಲೆಂದು ಅಲ್ಲೇ ಪಕ್ಕದಲ್ಲಿದ್ದ ಮನೆಯೊಳಗೆ ನುಗ್ಗಿದ ಅಶ್ರಫ್ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹಿಡಿದು ಮನೆಯ ಹೊರಗೆ ತಂದು ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ತಲವಾರುವೊಂದನ್ನು ಮನೆಯೊಳಗೆಯೇ ಬಿಟ್ಟು ಪರಾರಿಯಾಗಿದ್ದಾರೆ. ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಅಶ್ರಫ್ ಕಲಾಯಿ ಇಂದು ಬೆಳಗ್ಗೆ ಕಲಾಯಿಯಲ್ಲಿ ಧ್ವಜಾರೋಹಣ ನೆರೆವೇರಿಸಿ, ಬಳಿಕ ಹೊಂಡಮಯವಾಗಿರುವ ಕಲಾಯಿ ರಸ್ತೆಯ ದುರಸ್ತಿಗೊಳಿಸಲು ಸಾರ್ವಜನಿಕರೊಂದಿಗೆ ಶ್ರಮದಾನ ಮಾಡಿದ್ದರು. ಆ ಬಳಿಕ ಅವರ ಬಾಡಿಗೆಗೆಂದು ಬೆಂಜನಪದವು ಕರಾವಳಿ ಸೈಟ್‌ಗೆ ತೆರಳಿದ್ದರೆಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಅಶ್ರಫ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಸ್ಪತ್ರೆಯ ಎದುರು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News