×
Ad

ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರ 76ನೇ ಜನ್ಮ ದಿನಾಚರಣೆ

Update: 2017-06-21 15:18 IST

ಮಂಗಳೂರು, ಜೂ.21: ಬದುಕು ದೇವರ ವರ, ಅದನ್ನು ಪರರ ಸೇವೆ ಮತ್ತು ಇತರ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿದಾಗ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಮಂಗಳೂರಿನ ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಹೇಳಿದರು.

ಅವರು ಬುಧವಾರ ತಮ್ಮ 76ನೇ ಜನ್ಮದಿನದ ಅಂಗವಾಗಿ ಬಿಜೈ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನಲ್ಲಿ ನಡೆದ ಕೃತಜ್ಞಾತರ್ಪಣೆಯ ಬಲಿಪೂಜೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಹೆತ್ತವರು ತಮ್ಮ ಮಕ್ಕಳಿಗೆ ದೇವರ ಪ್ರೀತಿ ಮತ್ತು ಮೌಲ್ಯಗಳ ಬಗ್ಗೆ ತಿಳಿಸಿ ಅವರನ್ನು ಉತ್ತಮ ಪ್ರಜೆಗಳಾಗಿ ಬೆಳೆಸಬೇಕು ಎಂದು ಬಿಷಪ್ ಕರೆ ನೀಡಿದರು.

ಬಿಜೈ ಚರ್ಚ್‌ನ ಧರ್ಮಗುರು ಫಾ. ವಿಲ್ಸನ್ ಡಿ’ಸೋಜಾ ಅವರು ಸ್ವಾಗತಿಸಿ ಚರ್ಚ್ ಪರವಾಗಿ ಮತ್ತು ಸಮಸ್ತ ಧರ್ಮಗುರುಗಳ ಪರವಾಗಿ ಬಿಷಪ್ ಅಲೋ ಶಿಯಸ್ ಪಾವ್ಲ್ ಡಿ’ಸೋಜಾ ಅವರಿಗೆ ಹಾರ ಅರ್ಪಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಚರ್ಚ್‌ನ ಉಪಾಧ್ಯಕ್ಷ ಸ್ಟ್ಯಾನಿ ವಾಸ್ ಸಮ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಕೋನಿ ಸಲ್ದಾನ್ಹಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಧರ್ಮಪ್ರಾಂತ್ಯದ ಪ್ರಧಾನ ಗುರು ಮೊ. ಡೆನಿಸ್ ಮೊರಾಸ್ ಪ್ರಭು, ರೊಸಾರಿಯೊ ಕೆಥೆಡ್ರೆಲ್‌ನ ಧರ್ಮಗುರು ಫಾ ಜೆ.ಬಿ. ಕ್ರಾಸ್ತಾ, ಕಾರ್ಮೆಲ್ ಧರ್ಮಗುರುಗಳ ಸಂಸ್ಥೆಯ ಮುಖ್ಯಸ್ಥರಾದ ಫಾ. ಪಿಯುಸ್ ಜೇಮ್ಸ್ ಡಿ’ಸೋಜಾ, ಬಿಜೈ ಚರ್ಚ್‌ನ ಸಹಾಯಕ ಗುರು ಫಾ. ರೋಹನ್ ಲೋಬೊ, ಲೂರ್ಡ್ಸ್ ಕಾಲೇಜಿನ ಪ್ರಾಂಶುಪಾಲ ಫಾ. ರಾಬರ್ಟ್ ಡಿ’ಸೋಜಾ, ಧರ್ಮಪ್ರಾಂತ್ಯದ ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಕಥೊಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೊ, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಕುವೆಲ್ಲೊ ಮುಂತಾದವರು ಉಪಸ್ಥಿತರಿದ್ದರು.

ಮಂಗಳೂರು ಸುತ್ತಮುತ್ತಲಿನ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ಕ್ರೈಸ್ತರು ಸಮಾರಂಭದಲ್ಲಿ ಭಾಗವಹಿಸಿ ಬಿಷಪ್ ಅವರಿಗೆ ಜನ್ಮ ದಿನದ ಶುಭಾಶಯ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News