ಕಲಾಯಿ ಅಶ್ರಫ್ ಹತ್ಯೆ: ದುಷ್ಕರ್ಮಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲು ಎಸ್‌ಡಿಪಿಐ ಒತ್ತಾಯ
ಮಂಗಳೂರು, ಜೂ.21: ಎಸ್‌ಡಿಪಿಐ ಅಮ್ಮುಂಜೆ ವಲಯದ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕಲಾಯಿ ಅಶ್ರಫ್‌ರ ಹತ್ಯೆಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮ್ಮುಂಜೆ ವಲಯದ ಎಲ್ಲ ಧರ್ಮ ಬಾಂಧವರೊಂದಿಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದ ಅಶ್ರಫ್ ಇಂದು ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಥಳೀಯ ರಸ್ತೆಯಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಕಂಡು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಸೇರಿ ಶ್ರಮದಾನದ ಮೂಲಕ ರಸ್ತೆಗಳಿಗೆ ಕಲ್ಲು-ಮಣ್ಣು ತುಂಬಿ ರಿಪೇರಿ ಮಾಡಿದ್ದರು. ನಂತರ ತನ್ನ ರಿಕ್ಷಾದಲ್ಲಿ ದುಡಿಯಲು ಹೊರಟಿದ್ದರು. ಕೊಲೆಗಾರರು ರಿಕ್ಷಾವನ್ನು ಬಾಡಿಗೆಗೆ ಗೊತ್ತು ಪಡಿಸಿ ಅಶ್ರಫ್‌ರನ್ನು ಕರೆದೊಯ್ದು ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ. ಸಂಘಪರಿವಾರ ಚುನಾವಣೆ ಮತ್ತು ಅಲ್ಪಸಂಖ್ಯಾತರ ಹಬ್ಬಗಳ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟ್ಟಿಸಲು ಹಿಂದಿನಿಂದಲೂ ಸಂಚು ರೂಪಿಸುತ್ತಾ ಬಂದಿತ್ತು ಎಂದು ಅವರು ಆಪಾದಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರೇ ಕರಾವಳಿಯ ಗಲಭೆಗಳಿಗೆ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ನೇರ ಕಾರಣವೆಂದು ಬಹಿರಂಗವಾಗಿ ಹೇಳಿದ್ದಾರೆ. ಹಲವಾರು ಆರೋಪಗಳನ್ನು ಹೊಂದಿರುವ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿ ಕೇಸು ಜಡಿದು ಶಿಕ್ಷೆ ನೀಡದಿರುವುದೇ ಕರಾವಳಿಯಲ್ಲಿ ಆಗಾಗ ಗಲಭೆಗಳು ಮರುಕಳಿಸಲು ಮುಖ್ಯ ಕಾರಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಅಶ್ರಫ್‌ರನ್ನು ಕೊಲೆಗೈದವರನ್ನು ತಕ್ಷಣ ಯು.ಎ.ಪಿ.ಎ ಕಾಯ್ದೆಯಡಿ ಬಂಧಿಸಬೇಕು. ಅಶ್ರಫ್ ಕುಟುಂಬಕ್ಕೆ ಸರಕಾರ ಮೂವತ್ತು ಲಕ್ಷ ರೂ. ಪರಿಹಾರ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.