ಅಶ್ರಫ್ ಕಲಾಯಿ ಹತ್ಯೆ: ಪಿಎಫ್ಐ ಖಂಡನೆ
ಮಂಗಳೂರು, ಜೂ.21: ರಿಕ್ಷ ಚಾಲಕ ಮತ್ತು SDPI ಅಮ್ಮುಂಜೆ ವಲಯಾಧ್ಯಕ್ಷ ಅಶ್ರಫ್ ಕಲಾಯಿ ಹತ್ಯೆಯನ್ನು ಪಿಎಫ್ಐ ದ.ಕ ಜಿಲ್ಲೆ ಕಟು ಶಬ್ದಗಳಲ್ಲಿ ಖಂಡಿಸುತ್ತದೆ.
ಕಳೆದೊಂದು ತಿಂಗಳಿನಿಂದ ದ.ಕ ಜಿಲ್ಲೆಯಾದ್ಯಂತ ಗಲಭೆ ನಡೆಸಲು ವ್ಯವಸ್ಥಿತವಾಗಿ ಷಡ್ಯಂತರಗಳನ್ನು ನಡೆಸುತ್ತಿದ್ದ ಸಮಾಜದ್ರೋಹಿ ಸಂಘಟನೆಗಳ ಗಲಭೆ ನಡೆಸುವ ಸಂಚಿನ ಮುಂದುವರಿದ ಭಾಗ ಇದಾಗಿದ್ದು, ಸರ್ಕಾರ ಈ ಕುರಿತು ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನವಾಝ್ ಹೇಳಿದರು.
SDPIಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ ಧ್ವಜಾರೋಹಣ ಮುಗಿಸಿ ಸ್ಥಳೀಯವಾಗಿ ಸಮಸ್ಯೆಗಳಿದ್ದ ಅಲ್ಲಿನ ಕಾಲುದಾರಿ ಸರಿಪಡಿಸುವಂತಹಾ ಸಮಾಜಸೇವೆ ಮಾಡಿ ತನ್ನ ದೈನಂದಿನ ಕಾರ್ಯಚಟುವಟಿಕೆಯಾದ ಅಂಗವಿಕಲ ವ್ಯಕ್ತಿಯೋರ್ವನನ್ನು ತನ್ನ ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ ಕೊಲೆಗೈದಿರುತ್ತಾರೆ. ಓರ್ವ ಅಮಾಯಕನ ಈ ಹತ್ಯೆಯ ಹಿಂದಿರುವ ದುಷ್ಟ ಶಕ್ತಿಗಳನ್ನು ಆದಷ್ಟು ಬೇಗನೇ ಕಂಡುಹಿಡಿದು ಅವರನ್ನು ಕಾನೂನು ರೀತ್ಯಾ ಶಿಕ್ಷೆಗೊಳಪಡಿಸಬೇಕೆಂದು ಪಿಎಫ್ಐ ಪೋಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ ಎಂದು ದ.ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್ ತಿಳಿಸಿದ್ದಾರೆ.
ಅದೇ ರೀತಿ ಕೆಲವೊಂದು ಮಾಧ್ಯಮಗಳು ಪೂರ್ವಾಗ್ರಹಪೀಡಿತರಾಗಿ ಅಶ್ರಫ್ ಓರ್ವ ರೌಡಿ ಶೀಟರ್ ಎಂಬಂತೆ ಸುಳ್ಳು ವರದಿ ಮಾಡಿದ್ದು, ಜನರ ಮಧ್ಯೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮಾಧ್ಯಮ ವೃತ್ತಿಗೆ ದ್ರೋಹ ಬಗೆಯುವ ಕೆಲ ಮಾಧ್ಯಮಗಳ ನೀತಿಯನ್ನು ನಾವು ಖಂಡಿಸುತ್ತೇವೆ ಎಂದು ಅವರು ಈ ವೇಳೆ ಹೇಳಿದರು.
ಸರ್ಕಾರ ಮತ್ತು ಪೋಲೀಸ್ ಇಲಾಖೆ ಆದಷ್ಟು ಶೀಘ್ರ ಕೊಲೆ ಆರೋಪಿಗಳನ್ನು ಬಂಧಿಸಬೇಕಾಗಿದೆ. ಒಂದು ವೇಳೆ ಪೋಲೀಸರ ವಿಳಂಬ ನೀತಿಯಿಂದ ಜಿಲ್ಲೆಯಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಪೋಲೀಸ್ ಇಲಾಖೆಯೇ ಹೊಣೆ ಎಂದು ಅವರು ಹೇಳಿದರು.