ಧರ್ಮಸ್ಥಳ: ನ.21 ರಿಂದ 24 ರತನಕ ಅಂತರಾಷ್ಟ್ರೀಯ ಯೋಗ ಫೆಸ್ಟಿವಲ್
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮುಂದಿನ ನ. 21 ರಿಂದ 24 ರತನಕ ಅಂತರಾಷ್ಟ್ರೀಯ ಯೋಗ ಫೆಸ್ಟಿವಲ್ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ವತಿಯಿಂದ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಬುಧವಾರ 3 ನೇ ವಿಶ್ವಯೋಗ ದಿನಾಚರಣೆ ಸಂದರ್ಭ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.
ಶಾಂತಿವನ ಟ್ರಸ್ಟ್, ಯೋಗ ಫೆಡರೇಶನ್ ಆಫ್ ಇಂಡಿಯಾ ಸಹಕಾರದಿಂದ ನಡೆಯುವ ಅಂತರಾಷ್ಟ್ರೀಯ ಯೋಗ ಹಬ್ಬದ ಸಂದರ್ಭ ವಿಶ್ವದ ಖ್ಯಾತ ಯೋಗಪಟುಗಳು ಬರಲಿದ್ದು, ಅವರು ಯೋಗಾಸನಗಳ ಮಾಹಿತಿ ನೀಡಲಿದ್ದು, ಪ್ರದರ್ಶನವನ್ನೂ ಮಾಡಲಿದ್ದಾರೆ. ಯೋಗಾಭ್ಯಾಸಿಗಳು ನಾಲ್ಕು ದಿನಗಳ ಕಾಲದಲ್ಲಿ ಯೋಗ ವಿದ್ಯೆಯ ಬಗ್ಗೆ ಹಲವಾರು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಇಂದಿನ ಜಿೀವನ ಕ್ರಮ ಆಧುನಿಕ ತಂತ್ರಜ್ಞಾನದಿಂದಾಗಿ ಪರಿಶ್ರಮವಿಲ್ಲದೆ ನಡೆಸುವತ್ತ ಹೋಗುತ್ತಿದೆ. ಆದರೆ ಇದು ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಬದುಕಿನ ಅಂತಃಸತ್ವ ಏನು ಮತ್ತು ನಾವು ಹೇಗೆ ಯಶಸ್ವೀ ಜೀವನ ನಡೆಸಬಹುದು ಎಂಬುದನ್ನು ಪತಂಜಲಿ ಮಹರ್ಷಿಗಳು ಯೋಗದ ಮೂಲಕ ತಿಳಿಸಿಕೊಟ್ಟಿದ್ದಾರೆ. ಆರೋಗ್ಯವಂತ ಮನಸ್ಸಿದ್ದರೂ ದೇಹ ಸರಿಯಾಗಿರುವುದಿಲ್ಲ. ಹೀಗಾಗಿ ಎರಡನ್ನೂ ಸಮದೂಗಿಸಲು ಯೋಗ ಸಹಕಾರಿಯಾಗಿದೆ. ಜೀವನಕ್ಕೆ ಬೇಕಾದ ಅನೇಕ ಸಲಕರಣೆಗಳನ್ನು ಅಂತರ್ಜಾಲದ ಮೂಲಕ ಖರೀದಿಸಲು ಸಾಧ್ಯವಿದೆ. ಆದರೆ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಹೀಗಾಗಿ ಯುವ ಜನತೆ ಯೋಗ ಸಾಧಕರಾಗಬೇಕು ಎಂದು ಹೆಗ್ಗಡೆ ಆಶಿಸಿದರು.
ಇಪ್ಪತ್ತೈದು ವರ್ಷಗಳಿಂದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ವಯ ಗುರು ಯೋಗ ಶಿಬಿರಗಳ ಮೂಲಕ ಯೋಗ ಶಿಕ್ಷಕರನ್ನು ತರಬೇತಿಗೊಳಿಸುವ ಕಾರ್ಯ ಮಾಡುತ್ತಿದ್ದೆವು. ಲಕ್ಷಾಂತರ ಯೋಗಪಟುಗಳು ತಯಾರಾಗಿದ್ದಾರೆ ಎಂದರು.
ಅತಿಥಿಗಳಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷ ಶ್ಯಾಮ ಭಟ್ ಅವರು, ಚಿತ್ತ ಕೇಂದ್ರೀಕರಿಸಲು ಮಾನಸಿಕ ಉದ್ವೇಗ ನಿಯಂತ್ರಿಸಲು ಇರುವುದೇ ಯೋಗ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಯೋಗ ಮಾಡಬೇಕು ಎಂಬ ಪ್ರಧಾನಿಯ ಉದ್ದೇಶವನ್ನು ಮನೆಮನೆಗೂ ತಲುಪವಂತಾಗಬೇಕು ಎಂದರು.
ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಮಹಾ ಪ್ರಬಂಧಕ ರವೀಂದ್ರ ಭಂಡಾರಿ, ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತಿಯ ನಿರ್ದೇಶಕ ಅರುಣ್ ಪೂಜಾರ್, ರಾ.ಗಾ.ಆ.ವಿ.ವಿ. ಕರ್ನಾಟಕ ಇದರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಬಿ.ವಸಂತ ಶೆಟ್ಟಿ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್, ಡಾ ಬಿ. ಯಶೋವರ್ಮ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ ಐ. ಶಶಿಕಾಂತ ಜೈನ್ ಉಪಸ್ಥಿತರಿದ್ದರು.
ಎಸ್‌ಡಿಎಂ ಬಿಎನ್‌ವೈಎಸ್ ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಡಾ ಕಿರಣ್ ಕುಮಾರ್ ಹಾಗೂ ರಿಷಿಕಾ ಕಾರ್ಯಕ್ರಮ ನಿರ್ವಹಿಸಿದರು.