×
Ad

ಸರಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಕ್ರಮ: ಕೃಪಾ ಆಳ್ವ

Update: 2017-06-21 20:05 IST

ಉಡುಪಿ, ಜೂ.21: ಸರಕಾರಿ ಶಾಲೆಗಳ ಬಲವರ್ಧನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ಒಂದು ತಿಂಗಳೊಳಗೆ ಹಳೆ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಬೇಕು. ಅದರಲ್ಲಿ ಸದಸ್ಯರ ಕನಿಷ್ಠ ಸಂಖ್ಯೆ 150 ಇರ ಬೇಕು. ಈ ಮೂಲಕ ಆಯಾ ಶಾಲೆಗಳಿಗೆ ಅಗತ್ಯ ಶಿಕ್ಷಕರ ನೇಮಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಸರಕಾರಿ ಶಾಲಾ ಬಲವರ್ಧನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಬಡವರ ಬಗ್ಗೆ ತಾರತಮ್ಯದ ಕುರಿತು ಪೋಷಕರು ಪ್ರತಿ ಬಾರಿ ಆಯೋಗದ ಮುಂದೆ ದೂರು ನೀಡುತ್ತಾರೆ. ಶಿಕ್ಷಕರ ಕೊರತೆ, ಮೂಲಭೂತ ಸೌರ್ಕಯಗಳ ಅಭಾವದಿಂದ ಸರಕಾರಿ ಶಾಲೆ ಗಳು ಇಂದು ದುಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಬಲ ವರ್ಧನೆ ಮಾಡಲು ಆಯೋಗ ಮುಂದಾಗಿದೆ. ಈ ಕುರಿತು ಈಗಾಗಲೇ ಶಿಕ್ಷಣ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಎಲ್ಲ ಶಾಲೆಗಳಲ್ಲಿ ಶೌಚಾಲಯ:

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿನಕರ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 244 ಪ್ರಾಥಮಿಕ ಹಾಗೂ 362 ಹಿರಿಯ ಪ್ರಾಥಮಿಕ ಸರಕಾರಿ ಶಾಲೆಗಳಿದ್ದು, 110 ಸರಕಾರಿ ಪ್ರೌಢಶಾಲೆಗಳಿವೆ. ಒಟ್ಟು 40,000 ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದು, ಏಳೆಂಟು ಶಾಲೆಗಳಲ್ಲಿನ ಶೌಚಾಲಯಗಳನ್ನು ದುರಸ್ತಿ ಮಾಡಬೇಕಾಗಿದೆ. ಕೈತೊಳೆಯುವ ವ್ಯವಸ್ಥೆ ಎಲ್ಲ ಶಾಲೆಗಳಲ್ಲಿ ಇಲ್ಲ. 75 ಶಾಲೆಗಳಿಗೆ ಸಂಘಸಂಸ್ಥೆಗಳು ಹ್ಯಾಂಡ್‌ವಾಶ್‌ಗಳನ್ನು ನೀಡಿದ್ದಾರೆ ಎಂದರು.

ಎಲ್ಲ ಶಾಲೆಗಳಲ್ಲಿಯೂ ವಿದ್ಯುತ್ ವ್ಯವಸ್ಥೆ ಇದ್ದು, 3129 ಶಾಲಾ ಕೊಠಡಿ ಗಳಿಗೆ ಫ್ಯಾನುಗಳ ಅವಶ್ಯಕತೆ ಇದೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಕಡಿಮೆ ಯಾಗುತ್ತಿರುವುದರಿಂದ ಬೆಂಚ್, ಡೆಸ್ಕ್‌ಗಳ ಕೊರತೆ ಇಲ್ಲ. ನಲಿ-ಕಲಿ ಮಕ್ಕಳಿಗೆ 3000 ರೌಂಡ್ ಟೇಬಲ್ ಬೇಕಾಗಿದೆ. ಈ ವರ್ಷ 123ಶಾಲೆಗಳಿಗೆ ಪೈಂಟಿಂಗ್ ಮಾಡಲಾಗಿದೆ. ಕ್ರೀಡಾ ಸಲಕರಣೆಗಳು ಎಲ್ಲ ಶಾಲೆಗಳಲ್ಲಿವೆ. ಎಲ್ಲ 110 ಪ್ರೌಢ ಶಾಲೆಗಳಲ್ಲಿ ಪ್ರಯೋಗಾಲಯಗಳಿವೆ ಎಂದು ಅವರು ತಿಳಿಸಿದರು.

ಶುದ್ಧ ಕುಡಿಯುವ ನೀರಿಗೆ ಎಲ್ಲ ಶಾಲೆಗಳಲ್ಲಿ ನೀರಿನ ಮೂಲಗಳಿವೆ. ಆದರೆ ಮಾರ್ಚ್ ತಿಂಗಳಲ್ಲಿ ನೀರಿನ ಕೊರತೆ ಆರಂಭವಾಗುತ್ತದೆ. ಉಡುಪಿ ಕ್ಷೇತ್ರದ 54 ಶಾಲೆಗಳ ಪೈಕಿ 11ಶಾಲೆಗಳಲ್ಲಿ ಮಾತ್ರ ಫಿಲ್ಟರ್ ವ್ಯವಸ್ಥೆ ಇದೆ. ಅದೇ ರೀತಿ ಕುಂದಾಪುರ 131ರಲ್ಲಿ 19, ಬ್ರಹ್ಮಾವರ 94ರಲ್ಲಿ 24, ಕಾರ್ಕಳ 146ರಲ್ಲಿ 100 ಶಾಲೆಗಳಲ್ಲಿ ಫಿಲ್ಟರ್ ಇದೆ ಎಂದು ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.

ವಿಷಯವಾರು ಶಿಕ್ಷಕರ ನೇಮಕ:ಜಿಲ್ಲೆಯ ಪ್ರತಿ ಸರಕಾರಿ ಶಾಲೆಗಳಲ್ಲಿ ನಲಿ ಕಲಿಗೆ ಒಬ್ಬರು ಶಿಕ್ಷಕರು, ಒಂದ ರಿಂದ ಐದನೆ ತರಗತಿವರೆಗೆ ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು, ಆರರಿಂದ 10ನೆ ತರಗತಿವರೆಗೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು. ಅದೇ ರೀತಿ ಆಂಗ್ಲ, ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಪ್ರತಿಶಾಲೆಯಲ್ಲಿ ಇರ ಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಕೃಪಾ ಆಳ್ವ ತಿಳಿಸಿದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ಗಾರ್ಡನ್‌ಗಳನ್ನು ಬೆಳೆಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಕೃಪಾ ಆಳ್ವ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ತರಕಾರಿ ಗಾರ್ಡನ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಹೆಚ್ಚಿನ ಶಾಲೆಗಳಲ್ಲಿ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. 860 ಅಂಗನವಾಡಿಗಳಲ್ಲಿ ತರಕಾರಿ ಗಾರ್ಡನ್ ಮಾಡಲಾಗಿದ್ದು, ಅಲ್ಲಿಯೇ ನಿರ್ಮಿಸಲಾಗಿರುವ ಪೈಪ್ ಕಂಪೋಸ್ಟ್ ಮೂಲಕ ಗಾರ್ಡನ್‌ಗಳಿಗೆ ಗೊಬ್ಬರ ಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಶಾಲೆಗಳ ಶೌಚಾಲಯಗಳ ನಿರ್ವಹಣೆ ತುಂಬಾ ಕಷ್ಟ ಆಗುತ್ತಿದೆ. ಕಳೆದ ವರ್ಷದವರೆಗೆ ಮೂರು ತಿಂಗಳಿಗೊಮ್ಮೆ ಶೌಚಾಲಯ ನಿರ್ವಹಣೆಗಾಗಿ ಪಂಚ ಸೌಲಭ್ಯಗಳಲ್ಲಿ 300ರೂ. ನಿಂದ 500ರೂ.ವರೆಗೆ ಹಣ ಬಿಡುಗಡೆಯಾಗುತ್ತಿತ್ತು. ಈ ವರ್ಷ ಅದನ್ನು ನಿಲ್ಲಿಸಲಾಗಿದೆ ಎಂದು ಶಾಲಾ ಮುಖ್ಯಸ್ಥರು ಸಭೆಯಲ್ಲಿ ತಿಳಿಸಿದರು.

ಸಿಆರ್‌ಎಸ್ ಫಂಡ್, ದಾನಿಗಳು, ಹಳೆ ವಿದ್ಯಾರ್ಥಿ ಸಂಘಗಳಿಂದ ಹಣ ಹೊಂದಿಸಿಕೊಂಡು ಸರಕಾರ ಶಾಲೆಗಳ ಬಲವರ್ಧನೆ ಮಾಡಬೇಕು. ಅದೇ ರೀತಿ ಸಂಘಸಂಸ್ಥೆಗಳಿಂದ ಹಾಗೂ ಸ್ಥಳೀಯ ಕೈಗಾರಿಕೆಗಳಿಂದಲೂ ನೆರವನ್ನು ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಸಭೆ ಕರೆಯಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ಸ್ವಾಗತಿಸಿದರು. ಆಯೋಗದ ಸದಸ್ಯೆ ಡಾ.ವನಿತಾ ತೊರವಿ ವಂದಿಸಿದರು.

3 ತಿಂಗಳಲ್ಲಿ ಶಾಲಾ ಕಂಪೌಂಡ್ ನಿರ್ಮಾಣ:

ಜಿಲ್ಲೆಯ 64 ಸರಕಾರಿ ಶಾಲೆಗಳಿಗೆ ಮಾತ್ರ ಕಂಪೌಂಡ್ ಗೋಡೆ ಇದ್ದು, 32 ಶಾಲೆಗಳಲ್ಲಿ ಭಾಗಶಃ ಗೋಡೆಗಳಿವೆ. 128 ಶಾಲೆಗಳಲ್ಲಿ ಆರ್‌ಟಿಸಿ ಇಲ್ಲದ ಕಾರಣ ಕಂಪೌಂಡ್ ಗೋಡೆ ನಿರ್ಮಿಸಲು ಸಮಸ್ಯೆಯಾಗಿದೆ ಎಂದು ಡಿಡಿಪಿಐ ದಿನಕರ ಶೆಟ್ಟಿ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಂಪೌಂಡ್ ಗೋಡೆ ನಿರ್ಮಿಸಲು ಅವಕಾಶ ಇದ್ದು, ಅದನ್ನು ಬಳಸಿಕೊಂಡು ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಕಂಪೌಂಡ್ ಗೋಡೆ ನಿರ್ಮಿಸಬೇಕು ಎಂದು ಕೃಪಾ ಆಳ್ವ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಂಪೌಂಡ್ ಗೋಡೆ ನಿರ್ಮಿಸಲು ಅವಕಾಶ ಇರುವುದರಿಂದ ಪೋಷಕರನ್ನು ಬಳಸಿಕೊಂಡು ಆ ಕೆಲಸ ಮಾಡಬೇಕು. ಇದರಲ್ಲಿ ಹಣ ಬಿಡುಗಡೆಯಾಗಬೇಕಾದರೆ ಆಯಾ ಗ್ರಾಪಂನ ಗ್ರಾಮಸಭೆ ಯಲ್ಲಿ ಈ ಕುರಿತು ನಿರ್ಣಯ ಮಾಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News