ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಪ್ರಸ್ತಾಪ

Update: 2017-06-21 14:56 GMT

ಹೊಸದಿಲ್ಲಿ, ಜೂ.21: ಮಾನಸಿಕ ಅಸ್ವಸ್ಥತೆ, ಆಟಿಸಂ, ಬೌದ್ಧಿಕ ಅಶಕ್ತತೆ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ಸರಕಾರಿ ಉದ್ಯೋಗದಲ್ಲಿ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಈ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ವಿಭಾಗ(ಡಿಒಪಿಟಿ) ಪ್ರಸ್ತಾವನೆ ಸಲ್ಲಿಸಿದೆ. ವಿಕಲಾಂಗರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಲೆಯಲ್ಲಿ ಈ ಹೊಸ ಪ್ರಸ್ತಾವನೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

 ನೇರ ನೇಮಕಾತಿಯ ಸಂದರ್ಭ ಖಾಲಿ ಹುದ್ದೆಗಳ ಶೇ.4ರಷ್ಟು ಪ್ರಮಾಣವನ್ನು ಮಾದರಿಮಟ್ಟದ ಅಂಗವೈಕಲ್ಯ ಇರುವವರಿಗೆ ಮೀಸಲಿಡಬೇಕು ಎಂದು ಡಿಒಪಿಟಿ ಪ್ರಸ್ತಾವನೆಯಲ್ಲಿ ತಿಳಿಸಿದೆ. ಕುರುಡುತನ, ದೃಷ್ಟಿ ಮಂಜಾಗುವುದು, ಕಿವುಡುತನ, ಕುಬ್ಜತನ, ವಾಸಿಯಾದ ಕುಷ್ಟರೋಗ - ಇವನ್ನು ಮಾದರಿಮಟ್ಟದ ಅಂಗವೈಕಲ್ಯದ ಉದಾಹರಣೆಯಾಗಿದೆ.

    ತಿಳಿದುಕೊಳ್ಳುವುದು, ಕಲಿಕೆ, ಸಮಸ್ಯೆಗಳನ್ನು ಬಿಡಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ಸೀಮಿತ ಸಾಮರ್ಥ್ಯ ಇರುವವರು ಬೌದ್ಧಿಕ ಅಶಕ್ತರ ಗುಂಪಿಗೆ ಸೇರುತ್ತಾರೆ. ಬಡ್ತಿ ನೀಡುವಾಗ ಶೇ.1ರಷ್ಟು ಮೀಸಲಾತಿ ನೀಡಬೇಕು ಎಂದೂ ಪ್ರಸ್ತಾವಿಸಲಾಗಿದೆ. ಈ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಮತ್ತಿತರ ಹಿಂದುಳಿದ ವರ್ಗದವರಿಗೆ ನೀಡಲಾಗುವ ಮೀಸಲಾತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದೂ ತಿಳಿಸಲಾಗಿದೆ.

   ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ(ಇತರ ಹಿಂದುಳಿದ ವರ್ಗ)ದವರಿಗೆ ನೀಡಲಾಗುವ ಮೀಸಲಾತಿಯನ್ನು ಲಂಬ ಮೀಸಲಾತಿ ಮತ್ತು ಮಾಜಿ ಸೈನಿಕರು ಹಾಗೂ ಮಾದರಿಮಟ್ಟದ ಅಂಗವೈಕಲ್ಯ ಇರುವವರಿಗೆ ನೀಡಲಾಗುವ ಮೀಸಲಾತಿಯನ್ನು ಸಮತಲ ಮೀಸಲಾತಿ ಎಂದು ಕರೆಯಲಾಗುತ್ತದೆ. 15 ದಿನಗಳ ಒಳಗೆ ತನ್ನ ಕರಡು ಪ್ರಸ್ತಾವನೆಗೆ ಸಲಹೆ ಸೂಚನೆ ಸಲ್ಲಿಸುವಂತೆ ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News