ಮನೆ ಮನೆಗಳಲ್ಲಿ ಯೋಗ ಚಟುವಟಿಕೆ ನಡೆಯಲಿ: ದಿನಕರ ಬಾಬು
ಉಡುಪಿ, ಜೂ.21: ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಪ್ರತಿ ಮನೆ ಮನೆಗಳಲ್ಲಿ ಯೋಗಾಸನ ಚಟುವಟಿಕೆಗಳು ದಿನನಿತ್ಯ ನಡೆಯು ವಂತಾಗಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಬೆಂಗಳೂರು ಆಯುಷ್ ಇಲಾಖೆ, ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ ಎಸ್‌ಡಿಎಂ ಎಜುಕೇಷನಲ್ ಸೊಸೈಟಿಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ದಲ್ಲಿ ಬುಧವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಗರ ಪ್ರದೇಶದಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅರಿವು ಮೂಡಿದೆ. ಆದರೆ ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯೋಗವನ್ನು ದಿನನಿತ್ಯದ ಚಟುವಟಿಕೆಯನ್ನಾಗಿಸಿಕೊಂಡಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಕೂಡ ಉತ್ತಮಗೊಳಿಸ ಬಹುದು ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಯೋಗದಿಂದ ದೈನಂದಿನ ಒತ್ತಡಗಳಿಗೆ ಮುಕ್ತಿ ಸಿಗಲಿದೆ. ಯೋಗದಿಂದ ಆರೋಗ್ಯಯುತವಾಗಿ, ದೀರ್ಘಾ ಯುಷ್ಯ ಪಡೆಯಬಹುದಾಗಿದೆ. ಭಾರತೀಯ ಪರಂಪರೆಯಾದ ಯೋಗ ಇಂದು ವಿಶ್ವಮಾನ್ಯವಾಗಿದೆ. ಯೋಗದ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ಪುರಾತನ ಇತಿಹಾಸ ಹೊಂದಿರುವ ಯೋಗದಿಂದ ನಿರೋಗಿಯಾಗಬಹುದು. ಸೂರ್ಯ ನಮಸ್ಕಾರ ಉತ್ತಮ ಆಸನವಾಗಿದ್ದು, ಹಲವು ರೋಗಗಳನ್ನು ಇದರಿಂದ ದೂರ ಇಡಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ಸ್ವಾಗತಿಸಿದರು. ಡಾ.ಪೂಜಾ ವಂದಿಸಿದರು. ಸುಂದರ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.